ಡಿಡಿಸಿ ಚುನಾವಣೆ ಫಲಿತಾಂಶ: ಜಮ್ಮುವಿನಲ್ಲಿ ಬಿಜೆಪಿ, ಕಾಶ್ಮೀರದಲ್ಲಿ ಗುಪ್ಕರ್ ಮೈತ್ರಿಗೆ ಮುನ್ನಡೆ
ಶ್ರೀನಗರ: ಜಮ್ಮು-ಕಾಶ್ಮೀರದ 280 ಡಿಸ್ಟ್ರಿಕ್ಟ್ ಡೆವಲಪ್‌ಮೆಂಟ್ ಕೌನ್ಸಿಲ್(ಡಿಡಿಸಿ) ಸೀಟುಗಳಿಗೆ ನವೆಂಬರ್ 28ರಿಂದ ಡಿಸೆಂಬರ್ 19ರ ತನಕ ನಡೆದಿರುವ 8 ಹಂತದ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಬಂದಿರುವ ಮಾಹಿತಿಯ ಪ್ರಕಾರ ಜಮ್ಮು ವಿಭಾಗದಲ್ಲಿ ಬಿಜೆಪಿ 62 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಗುಪ್ಕರ್ 15,ಕಾಂಗ್ರೆಸ್ 15 ಹಾಗೂ ಅಪ್ನಿ ಪಾರ್ಟಿ 2 ಸ್ಥಾನ, ಇತರರು 26ರಲ್ಲಿ ಮುನ್ನಡೆಯಲ್ಲಿದ್ದಾರೆ.
ಕಾಶ್ಮೀರ ವಿಭಾಗದಲ್ಲಿ ಗುಪ್ಕರ್ ಮೈತ್ರಿಕೂಟ 47ರಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ 4ರಲ್ಲಿ, ಕಾಂಗ್ರೆಸ್ 10ರಲ್ಲಿ,ಅಪ್ನಿ ಪಾರ್ಟಿ 8ರಲ್ಲಿ ಹಾಗೂ ಇತರರು 34 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ರಾಜ್ಯ ಚುನಾವಣಾ ಆಯೋಗವು ಎಲೆಕ್ಟ್ರಾನಿಕ್ ಮತ ಯಂತ್ರ ಅಥವಾ ಇವಿಎಂ ಬದಲಿಗೆ ಬ್ಯಾಲಟ್ ಪೇಪರ್‌ನಲ್ಲಿ ಚುನಾವಣೆ ನೆಡೆಸಿರುವ ಕಾರಣ ಮತ ಎಣಿಕೆ ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ನಿರೀಕ್ಷೆಯಿದೆ.ೞನ್ಯಾಶನಲ್ ಕಾನ್ಫರೆನ್ಸ್ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಸಹಿತ ಏಳು ರಾಜಕೀಯ ಪಕ್ಷಗಳು ಮೈತ್ರಿಕೂಟ ರಚಿಸಿಕೊಂಡು ಗುಪ್ಕರ್ ಹೆಸರಿನಲ್ಲಿ ಸ್ಪರ್ಧಿಸಿವೆ.
ಜಮ್ಮು-ಕಾಶ್ಮೀರದ 280 ಡಿಡಿಸಿ ಸೀಟುಗಳಿಗಾಗಿ ಚುನಾವಣೆ ನಡೆದಿದ್ದು, ಸುಮಾರು 2,181 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕೇಂದ್ರ ಸರಕಾರವು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ರದ್ದುಪಡಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಬಳಿಕ ನಡೆದ ಮೊದಲ ಬಾರಿ ಚುನಾವಣೆ ನಡೆಸಲಾಗಿತ್ತು.