ಕೊರೋನ ನಿಯಮ ಉಲ್ಲಂಘನೆ: ಮುಂಬೈ ಪಬ್ ಮೇಲೆ ದಾಳಿ
ಮುಂಬೈ, ಡಿ. 22: ಕೊರೋನ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಮುಂಬೈಯ ಪಬ್ ಒಂದರ ಮೇಲೆ ಮಂಗಳವಾರ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಬ್‌ನ 7 ಮಂದಿ ಸಿಬ್ಬಂದಿ ಹಾಗೂ ಸೆಲೆಬ್ರೆಟಿಗಳು ಸೇರಿದಂತೆ 27 ಮಂದಿ ಗ್ರಾಹಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನುಮತಿಸಲಾದ ಸಮಯ ಮೀರಿ ಕಾರ್ಯನಿರ್ವಹಿಸಿದ ಹಾಗೂ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆಯಂತಹ ಕೊರೋನ ಸಾಂಕ್ರಾಮಿಕ ರೋಗದ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸಹರಾ ಪ್ರದೇಶದ ವಿಮಾನ ನಿಲ್ದಾಣದ ಸಮೀಪ ಇರುವ ಡ್ರಾಗನ್‌ಫ್ಲೈ ಪಬ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮುಂಬೈಯಲ್ಲಿ ಪಬ್‌ಗಳು ರಾತ್ರಿ 11.30ರ ವರೆಗೆ ಕಾರ್ಯಾಚರಿಸಬಹುದು. ಆದರೆ, ಡ್ರಾಗನ್ ಫ್ಲೈ ಕ್ಲಬ್ ಮುಂಜಾನೆ 4 ಗಂಟೆ ವರೆಗೆ ಕಾರ್ಯಾಚರಣೆ ನಡೆಸುತ್ತಿತ್ತು. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸ್‌ನ ವಿಶೇಷ ತಂಡ ಮುಂಜಾನೆ 3 ಗಂಟೆಗೆ ಪಬ್ ಮೇಲೆ ದಾಳಿ ನಡೆಸಿತು ಎಂದು ಪೊಲೀಸರು ತಿಳಿಸಿದ್ದಾರೆ.