ಪರಿಶಿಷ್ಟ ಜಾತಿ, ಸಮುದಾಯಗಳಿಗೆ ಮಾಡಿದ ಅನ್ಯಾಯಗಳ ಕುರಿತು ನಾವು ಅವಮಾನದಿಂದ ತಲೆ ತಗ್ಗಿಸಬೇಕು: ಮದ್ರಾಸ್ ಹೈಕೋರ್ಟ್

Update: 2020-12-24 09:28 GMT

ಚೆನ್ನೈ: "ಕಳೆದ ಹಲವಾರು ಶತಮಾನಗಳಿಂದ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಮಾಡಲಾಗಿರುವ ಅನ್ಯಾಯದಿಂದ ನಾವು ಅವಮಾನದಿಂದ ತಲೆತಗ್ಗಿಸಬೇಕಾಗಿದೆ, ಪರಿಸ್ಥಿತಿಯಲ್ಲಿ ಈಗಲೂ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ, ಈಗಲೂ ಅವರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿಲ್ಲ ಹಾಗೂ ಅವರ ವಿರುದ್ಧದ ಅಪರಾಧಗಳು ನಡೆಯುತ್ತಿವೆ  ಮತ್ತು ಅವರಿಗೆ ಸೂಕ್ತ ಮೂಲಭೂತ ಸವಲತ್ತುಗಳು ದೊರಕುತ್ತಿಲ್ಲ,'' ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.

ರುದ್ರಭೂಮಿಯೊಂದಕ್ಕೆ ತೆರಳಲು ಸೂಕ್ತವಾದ ರಸ್ತೆಯಿಲ್ಲದೆ ಪರಿಶಿಷ್ಟ ಜಾತಿಯ ಜನರು ಪಡುತ್ತಿರುವ ಬವಣೆಯ ಕುರಿತು ಪತ್ರಿಕಾ ವರದಿಯೊಂದನ್ನು ಆಧರಿಸಿ ನ್ಯಾಯಾಲಯ ತಾನು ದಾಖಲಿಸಿದ ಸ್ವಯಂಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.

ಸೂಕ್ತ ರಸ್ತೆಯಿಲ್ಲದ ತಮಿಳುನಾಡಿನ ಮೇಲೂರು ತಾಲೂಕಿನ ಮರುತ್ತುರ್ ಕಾಲನಿಯಲ್ಲಿನ ಪರಿಶಿಷ್ಟರು ಗದ್ದೆಗಳ ಮೂಲಕ ಸಾಗಿ ಅಲ್ಲಿನ ರುದ್ರಭೂಮಿಗೆ ತೆರಳುವಂತಾಗಿದೆ ಎಂದು ತಮಿಳು ದೈನಿಕ ದಿನಕರನ್ ಡಿಸೆಂಬರ್ 21ರಂದು ವರದಿ ಮಾಡಿತ್ತು.

ಇದನ್ನು ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವ ನ್ಯಾಯಾಲಯ ರಾಜ್ಯದ ಆದಿ ದ್ರಾವಿಡರ್ ಹಾಗೂ ಬುಡಕಟ್ಟು ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮುನಿಸಿಪಲ್ ಮತ್ತು ಜಲಪೂರೈಕೆ ಇಲಾಖೆಯ  ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳನ್ನು ಪ್ರತಿವಾದಿಯಾಗಿಸಿದೆಯಲ್ಲದೆ ಎಷ್ಟು ಕಡೆಗಳಲ್ಲಿ ಪರಿಶಿಷ್ಟರು ವಾಸಿಸುವ ಪ್ರದೇಶಗಳಲ್ಲಿ ರುದ್ರಭೂಮಿಗೆ ಸೂಕ್ತ ಸಂಪರ್ಕಗಳಿಲ್ಲ?  ರಸ್ತೆ ಒದಗಿಸಲು ಕೈಗೊಳ್ಳಲಾದ ಕ್ರಮಗಳು ಹಾಗೂ ಪರಿಶಿಷ್ಟರು ವಾಸಿಸುವ ಪ್ರದೇಶಗಳಿಗೆ ಎಲ್ಲಾ ಅಗತ್ಯ ಸವಲತ್ತುಗಳನ್ನು ಯಾವಾಗ ಒದಗಿಸಲಾಗುವುದು? ಎಂಬ ಪ್ರಶ್ನೆಗಳಿಗೆ ಉತ್ತರಿಸುವಂತೆ ನ್ಯಾಯಾಲಯ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News