ಒಂದು ವೇಳೆ ಮೋಹನ್ ಭಾಗ್ವತ್ ಮೋದಿಯ ವಿರುದ್ಧ ಮಾತನಾಡಿದರೆ ಅವರನ್ನೂ ಭಯೋತ್ಪಾದಕ ಎನ್ನುತ್ತಾರೆ: ರಾಹುಲ್ ಗಾಂಧಿ

Update: 2020-12-24 15:30 GMT

ಹೊಸದಿಲ್ಲಿ,ಡಿ.24: ಭಾರತದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ. ಅದು ಕೇವಲ ಕಲ್ಪನೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಇಲ್ಲಿ ಹೇಳಿದರು.

ಕಾಂಗ್ರೆಸ್ ನಿಯೋಗದೊಂದಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿಯಾಗಿ ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಅಹವಾಲು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, ಸರಕಾರವು 62 ಕೋಟಿ ರೈತರು ಮತ್ತು ಕೃಷಿ ಕಾರ್ಮಿಕರ ಜೀವಗಳು ಮತ್ತು ಜೀವನೋಪಾಯಗಳನ್ನು ಪಣಕ್ಕಿಟ್ಟು ತನ್ನ ಕೆಲವೇ ಬಂಡವಾಳಶಾಹಿ ಮಿತ್ರರ ಹಿತಾಸಕ್ತಿಗಳನ್ನು ಪೂರೈಸಲು ಕೆಲಸ ಮಾಡುತ್ತಿರುವಂತಿದೆ ಎಂದು ಆರೋಪಿಸಿದರು.

ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಮತ್ತು ಲೋಕಸಭೆಯಲ್ಲಿ ಪಕ್ಷದ ನಾಯಕ ಆಧೀರ್ ರಂಜನ್ ಚೌಧುರಿ ಅವರನ್ನೊಳಗೊಂಡ ರಾಹುಲ್ ನೇತೃತ್ವದ ಕಾಂಗ್ರೆಸ್ ನಿಯೋಗವು ರೈತ ವಿರೋಧಿಯಾಗಿರುವ ನೂತನ ಕೃಷಿ ಕಾನೂನುಗಳನ್ನು ಹಿಂದೆಗೆದುಕೊಳ್ಳಲು ಸಂಸತ್ತಿನ ವಿಶೇಷ ಜಂಟಿ ಅಧಿವೇಶನವನ್ನು ಕರೆಯುವಂತೆ ರಾಷ್ಟ್ರಪತಿಗಳನ್ನು ಆಗ್ರಹಿಸಿತು. ಅಹವಾಲಿನೊಂದಿಗೆ ಕಳೆದ ಮೂರು ತಿಂಗಳುಗಳಲ್ಲಿ ಕೃಷಿ ಕಾನೂನುಗಳ ವಿರುದ್ಧ ಸಂಗ್ರಹಿಸಲಾದ ಎರಡು ಕೋಟಿ ಸಹಿಗಳಿರುವ ಮನವಿಯನ್ನೂ ನಿಯೋಗವು ರಾಷ್ಟ್ರಪತಿಗಳಿಗೆ ಸಲ್ಲಿಸಿತು.

ಬೆಳಿಗ್ಗೆ ರಾಷ್ಟ್ರಪತಿ ಭವನಕ್ಕೆ ತೆರಳುವ ಮುನ್ನ ಕಾಂಗ್ರೆಸ್ ನಾಯಕರು ಇಲ್ಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಸೇರಿದ್ದರು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಉಸ್ತುವಾರಿಯನ್ನು ಹೊತ್ತುಕೊಂಡಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಇತರ ಕೆಲವು ನಾಯಕರಿಗೆ ರಾಷ್ಟ್ರಪತಿ ಭವನಕ್ಕೆ ತೆರಳಲು ಅವಕಾಶ ನಿರಾಕರಿಸಿದ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ವಶಕ್ಕೆ ತೆಗೆದುಕೊಂಡರು.

’ನೂತನ ಕೃಷಿ ಕಾನೂನುಗಳು ರೈತ ವಿರೋಧಿಯಾಗಿವೆ ಎಂದು ನಾವು ರಾಷ್ಟ್ರಪತಿಗಳಿಗೆ ತಿಳಿಸಿದ್ದೇವೆ. ಈ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಇಡೀ ದೇಶವು ನೋಡುತ್ತಿದೆ. ಈ ಕಾನೂನುಗಳು ರದ್ದುಗೊಳ್ಳುವವರೆಗೆ ರೈತರು ತಮ್ಮ ಮನೆಗಳಿಗೆ ಮರಳುವುದಿಲ್ಲ ಎಂದು ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಲು ಬಯಸುತ್ತೇನೆ. ಸರಕಾರವು ಸಂಸತ್ತಿನ ಜಂಟಿ ಅಧಿವೇಶನವನ್ನು ಕರೆಯಬೇಕು ಮತ್ತು ಈ ಕಾನೂನುಗಳನ್ನು ಹಿಂದೆಗೆದುಕೊಳ್ಳಬೇಕು ’ಎಂದ ರಾಹುಲ್,ಎಲ್ಲ ಪ್ರತಿಪಕ್ಷಗಳು ರೈತರಿಗೆ ಬೆಂಬಲವಾಗಿ ನಿಂತಿವೆ ಎಂದರು.

ರೈತರು ನೋವನ್ನು ಅನುಭವಿಸುತ್ತಿದ್ದಾರೆ,ಸಾಯುತ್ತಿದ್ದಾರೆ. ಪ್ರಧಾನಿಯವರು ಅವರ ಸಮಸ್ಯೆಯನ್ನು ಆಲಿಸಲೇಬೇಕು. ಅವರು ಈ ಕಾನೂನುಗಳನ್ನು ರದ್ದುಗೊಳಿಸದಿದ್ದರೆ ದೇಶವು ಸಂಕಷ್ಟಕ್ಕೆ ಸಿಲುಕುತ್ತದೆ ಎಂದ ಅವರು,ಪ್ರಧಾನಿಯವರು ತನ್ನ ಬಂಡವಾಳಶಾಹಿ ಮಿತ್ರರು ದುಡ್ಡು ಮಾಡಲು ಅನುಕೂಲಗಳನ್ನು ಕಲ್ಪಿಸುತ್ತಿದ್ದಾರೆ. ಅದು ರೈತರಾಗಿರಲಿ,ಕೃಷಿ ಕಾರ್ಮಿಕರಾಗಿರಲಿ ಅಥವಾ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ಆಗಿರಲಿ,ಮೋದಿಯವರನ್ನು ವಿರೋಧಿಸಲು ಪ್ರಯತ್ನಿಸುವವರನ್ನು ಭಯೋತ್ಪಾದಕರು ಎಂದು ಕರೆಯಲಾಗುತ್ತದೆ. ಮೋದಿಯವರಿಂದ ಅಧಿಕಾರವನ್ನು ಕಿತ್ತುಕೊಳ್ಳಲು ಪ್ರಯತ್ನಿಸುವವರನ್ನು ರಾಷ್ಟ್ರವಿರೋಧಿಗಳು ಎಂದು ಬಣ್ಣಿಸಲಾಗುತ್ತದೆ. ಕೇವಲ 3-4 ಜನರು ಇಡೀ ವ್ಯವಸ್ಥೆಯನ್ನು ನಡೆಸುತ್ತಿದ್ದಾರೆ. ಇದು ಭಾರತದ ಪರಿಕಲ್ಪನೆಯ ಮೇಲಿನ ದಾಳಿಯಾಗಿದೆ. ನಮ್ಮ ಸಂಸದರು ತಮ್ಮ ಕಚೇರಿಗಳಿಂದ ಹೊರಗೆ ತೆರಳುವುದನ್ನೂ ಸರಕಾರವು ತಡೆಯುತ್ತಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಎನ್ನುವುದು ಕೇವಲ ಭ್ರಮೆಯಾಗಿದೆ ಅಷ್ಟೇ ಎಂದರು. ಚೀನಿ ಸೈನಿಕರು ಈಗಲೂ ಭಾರತದ ಗಡಿಗಳಲ್ಲಿದ್ದಾರೆ ಮತ್ತು ಪ್ರಧಾನಿಗಳು ಆ ಬಗ್ಗೆ ಪಶ್ಚಿಮಬಂಗಾಳ ಚುನಾವಣೆ: ಎಡಪಕ್ಷಗಳೊಂದಿಗಿನ ಮೈತ್ರಿ ಅಂತಿಮಗೊಳಿಸಿದ ಕಾಂಗ್ರೆಸ ಮೌನವಾಗಿದ್ದಾರೆ ಎಂದು ರಾಹುಲ್ ಆರೋಪಿಸಿದರು.

ದೇಶಾದ್ಯಂತ ಕೋಟ್ಯಂತರ ರೈತರು ಮತ್ತು ಕೃಷಿ ಕಾರ್ಮಿಕರು ಮೂರು ನೂತನ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದ್ದಾರೆ. ಲಕ್ಷಾಂತರ ಜನರು ಕಳೆದ 29 ದಿನಗಳಿಂದಲೂ ಕಡುಚಳಿಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ನಿರಂಕುಶ ಮೋದಿ ಸರಕಾರವು ಅವರ ನೋವು ಮತ್ತು ಸಂಕಷ್ಟಗಳನ್ನು ಆಲಿಸಲು ನಿರಾಕರಿಸುತ್ತಿದೆ ಎಂದು ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಅಹವಾಲಿನಲ್ಲಿ ಹೇಳಲಾಗಿದೆ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News