ದಿಲ್ಲಿ ಗಲಭೆ ಪ್ರಕರಣ: ವಕೀಲ ಮೆಹಮೂದ್ ಪ್ರಾಚ ಕಚೇರಿಯ ಮೇಲೆ ಪೊಲೀಸ್ ದಾಳಿ

Update: 2020-12-24 12:47 GMT
Mehmood Pracha/Twitter

 ಹೊಸದಿಲ್ಲಿ,ಡಿ.24:  ಈಶಾನ್ಯ ದಿಲ್ಲಿಯಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ನಡೆದ ಮತೀಯ ಹಿಂಸಾಚಾರ ಪ್ರಕರಣಗಳ ತನಿಖೆಯ ಭಾಗವಾಗಿ ದಿಲ್ಲಿ ಪೊಲೀಸರ ವಿಶೇಷ ಸೆಲ್ ಅಧಿಕಾರಿಗಳು ಗುರುವಾರ ವಕೀಲ ಮೆಹಮೂದ್ ಪ್ರಾಚ ಅವರ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಪ್ರಾಚ ಅವರು ದಿಲ್ಲಿ ಗಲಭೆ ಪ್ರಕರಣದ ಹಲವು ಆರೋಪಿಗಳ  ಪರ ವಕೀಲರಾಗಿದ್ದಾರೆ.

ಸ್ಥಳೀಯ ನ್ಯಾಯಾಲಯದಿಂದ ವಾರಂಟ್ ಪಡೆದು ಪ್ರಾಚ ಅವರ ಕಚೇರಿ ಮೇಲೆ ದಾಳಿ ನಡೆಸಿ ಅಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಮ್ಮ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಪ್ರಾಚಾ ಹೇಳಿದ್ದಾರೆ.  ಪ್ರಾಚ ಅವರ ವಕೀಲ ಸಂಸ್ಥೆಯ ಅಧಿಕೃತ ಇಮೇಲ್ ವಿಳಾಸದ `ಔಟ್ ಬಾಕ್ಸ್‍ನ ಮೆಟಾಡಾಟಾ' ಮತ್ತು ಇತರ ದಾಖಲೆಗಳನ್ನು ಹುಡುಕುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಮ್ಮ ಕಚೇರಿಯ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ವಶಪಡಿಸಿಕೊಂಡಿರುವುದು `ಆದೇಶದ ಉಲ್ಲಂಘನೆ' ಎಂದು ವಕೀಲ ಪ್ರಾಚ  ದಾಳಿಯ ವೇಳೆ ಪೊಲೀಸರಿಗೆ ಹೇಳಿದ್ದಾರೆ.

ದಿಲ್ಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ತನಕ ಎರಡು ಚಾರ್ಜ್ ಶೀಟ್‍ಗಳನ್ನು ಸಲ್ಲಿಸಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಖಜೌರಿ ಖಸ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಉಚ್ಛಾಟಿತ ಆಪ್ ಕೌನ್ಸಿಲರ್ ತಾಹಿಲ್ ಹುಸೈನ್ ಸಹಿತ 15 ಮಂದಿ ವಿರುದ್ಧ  ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಹೇರಲಾಗಿತ್ತು. ಈ ಕುರಿತು 17.000 ಪುಟಗಳ ಚಾರ್ಜ್ ಶೀಟ್ ಅನ್ನು ಕರ್ಕಡೋಮ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ನವೆಂಬರ್ 22ರಂದು ದಿಲ್ಲಿ ಪೊಲೀಸರು ಪೂರಕ ಚಾರ್ಜ್ ಶೀಟ್ ಸಲ್ಲಿಸಿ ಇದರಲ್ಲಿ ಜೆಎನ್‍ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಹಾಗೂ ಇಬ್ಬರು ಜೆಎನ್‍ಯು ವಿದ್ಯಾರ್ಥಿ ಹೋರಾಟಗಾರರಾದ ಶರ್ಜೀಲ್ ಇಮಾಮ್ ಹಾಗೂ ಫೈಝನ್ ಖಾನ್ ವಿರುದ್ಧ ದೋಷಾರೋಪ ಹೊರಿಸಿದ್ದರು. ಖಾಲಿದ್ ಅವರು ಈ ಹಿಂಸಾಚಾರದ ಹಿಂದೆ ಪಾತ್ರ ವಹಿಸಿದ್ದರು ಹಾಗೂ ಟ್ರಂಪ್ ಭೇಟಿಯ ವೇಳೆಯೇ ಅದು ನಡೆಯುವಂತೆ ಮಾಡಿದ್ದರು ಎಂದು 200 ಪುಟಗಳ ಪೂರಕ ಜಾರ್ಜ್ ಶೀಟ್‍ನಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News