ತೃತೀಯ ಲಿಂಗಿಗಳು, ವಯಸ್ಸಾದವರು ಮತ್ತು ಅಂಗವಿಕಲರನ್ನು ಸಂಕಷ್ಟಕ್ಕೆ ತಳ್ಳಿದ್ದ 2020
ಹೊಸದಿಲ್ಲಿ,ಡಿ.24: ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ 2020 ತೃತೀಯ ಲಿಂಗಿಗಳು,ವಯಸ್ಸಾದ ವ್ಯಕ್ತಿಗಳು ಮತ್ತು ಅಂಗವಿಕಲರಿಗೆ ಕಠಿಣ ವರ್ಷವಾಗಿ ಪರಿಣಮಿಸಿತ್ತು. ಇದೇ ವೇಳೆ ಸಾಂಕ್ರಾಮಿಕವು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು.
ಹಿರಿಯ ನಾಗರಿಕರು ಕೋವಿಡ್-19ಕ್ಕೆ ಸುಲಭವಾಗಿ ಗುರಿಯಾಗುವ ಅಪಾಯದ ವಿರುದ್ಧ ಹೋರಾಡುವಂತಾಗಿದ್ದರೆ, ಸಾಂಕ್ರಾಮಿಕದ ಸಾಮಾಜಿಕ ಪರಿಣಾಮಗಳು ತೃತೀಯ ಲಿಂಗಿಗಳು ಮತ್ತು ಅಂಗವಿಕಲರನ್ನು ಸಂಕಷ್ಟಗಳ ಸುಳಿಯಲ್ಲಿ ಸಿಲುಕಿಸಿದ್ದವು.
ಸಾಮಾಜಿಕವಾಗಿ ಬಹಿಷ್ಕಾರ ಸ್ಥಿತಿಯಲ್ಲಿರುವ ದೇಶದ ಅಂದಾಜು 4.88 ಲಕ್ಷ ತೃತೀಯ ಲಿಂಗಿಗಳ ಪೈಕಿ ಹೆಚ್ಚಿನವರು ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುವ,ಮದುವೆಯಂತಹ ಸಮಾರಂಭ ಗಳಲ್ಲಿ ನರ್ತಿಸುವ ಮತ್ತು ಲೈಂಗಿಕ ವೃತ್ತಿಯ ಅನಿವಾರ್ಯತೆಗೆ ಸಿಲುಕಿದ್ದಾರೆ.
ಆದರೆ ಕೋವಿಡ್-19 ಸಾಂಕ್ರಾಮಿಕ ಸ್ಫೋಟಗೊಂಡಾಗಿನಿಂದ ಹೆಚ್ಚಿನ ತೃತೀಯ ಲಿಂಗಿಗಳು ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ ಮತ್ತು ಬದುಕು ಸಾಗಿಸಲು ಹೋರಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ತಾವು ತಮ್ಮ ಸಂಗಾತಿಗಳು ಮತ್ತು ಕುಟುಂಬ ಸದಸ್ಯರಿಂದ ಮೂದಲಿಕೆ,ನಿಂದೆ ಮತ್ತು ಕೌಟುಂಬಿಕ ಹಿಂಸೆಗೆ ಗುರಿಯಾಗಿದ್ದೇವೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
‘ಕೋವಿಡ್-19 ಸಾಂಕ್ರಾಮಿಕವು ನಾವು ನಮ್ಮ ಕೊರತೆಗೆ ಹೊಂದಿಕೊಳ್ಳಲು,ನಮ್ಮ ಬವಣೆಗಳು ಆಲಿಸುವಂತಾಗಲು ಮತ್ತು ಜೀವ ಬೆದರಿಕೆಯ ಸವಾಲುಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಹೋರಾಡಬೇಕಿದ್ದ ಹಿಂದಿನ ದಿನಗಳಿಗೆ ನಮ್ಮನ್ನು ತಳ್ಳಿದೆ ’ ಎಂದು ಹೇಳಿದ ಭುವನೇಶ್ವರದ ಎನ್‌ಜಿಓ ‘ಸಖಾ’ದ ಸಹಸ್ಥಾಪಕಿ ಮೀರಾ ಪರಿಡಾ ಅವರು,ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನೀತಿಗಳನ್ನು ಮತ್ತು ಕಾರ್ಯತಂತ್ರಗಳನ್ನು ರೂಪಿಸುವಾಗ ತೃತೀಯ ಲಿಂಗಿಗಳ ಕಳವಳಗಳನ್ನು ಪರಿಗಣಿಸುವಂತೆ ಸರಕಾರವನ್ನು ಆಗ್ರಹಿಸಿದರು.
ತೃತೀಯ ಲಿಂಗಿ ಸಮುದಾಯಕ್ಕೆ ಈಗ ಸಮಾಜ ಮತ್ತು ಸರಕಾರದ ನೆರವು ಮತ್ತು ಬೆಂಬಲ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ ಎಂದರು.
ಅಂಗವಿಕಲ ಸಮುದಾಯವು ಸಾಂಕ್ರಾಮಿಕದ ಜೊತೆಗೆ ಸುರಕ್ಷಿತ ಅಂತರದ ಪರಿಣಾಮದ ವಿರುದ್ಧವೂ ಹೋರಾಡುವಂತಾಗಿತ್ತು. ಕೋವಿಡ್ -19 ಮುಖ್ಯವಾಗಿ ಸ್ಪರ್ಶದ ಮೂಲಕವೇ ಹರಡುತ್ತದೆ ಮತ್ತು ಇದೇ ಸ್ಪರ್ಶವು,ಅಂಗವಿಕಲರು ವಿಶೇಷವಾಗಿ ದೃಷ್ಟಿಹೀನರು ಇತರರೊಂದಿಗೆ ಸಂವಹನಕ್ಕಾಗಿ ಬಳಸುವ ಪ್ರಮುಖ ಮಾಧ್ಯಮವಾಗಿದೆ. ಆನ್‌ಲೈನ್ ಮಾಧ್ಯಮಗಳಲ್ಲಿ ತಮಗೆ ಅನುವಾದಕರಂತಹ ಸೌಲಭ್ಯಗಳ ಕೊರತೆಯಿಂದಾಗಿ ಇ-ಶಿಕ್ಷಣವನ್ನು ಪಡೆಯಲೂ ಅವರು ಪರದಾಡುವಂತಾಗಿತ್ತು.
ವಯಸ್ಸಾದ ವ್ಯಕ್ತಿಗಳು,ವಿಶೇಷವಾಗಿ ವೃದ್ಧಾಶ್ರಮಗಳಲ್ಲಿ ವಾಸವಿರುವವರು ಕೂಡ ಕೋವಿಡ್-19ಕ್ಕೆ ಸುಲಭವಾಗಿ ಗುರಿಯಾಗುವ ಅಪಾಯದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು.
ಕಳೆದ ಮಾರ್ಚ್‌ನಲ್ಲಿ ರಾಷ್ಟ್ರಾದ್ಯಂತ ಲಾಕ್‌ಡೌನ್ ಘೋಷಣೆಯಾದ ಬೆನ್ನಿಗೇ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಕೋವಿಡ್-19ರ ಹಿನ್ನೆಲೆಯಲ್ಲಿ ಅಂಗವಿಕಲರ ರಕ್ಷಣೆ ಮತ್ತು ಸುರಕ್ಷತೆಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಮಗ್ರ ಅಂಗವೈಕಲ್ಯ ಸೇರ್ಪಡೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು.