ಆಸ್ಪತ್ರೆಗೆ ದಾಖಲಾದ ಸೂಪರ್ ಸ್ಟಾರ್ ರಜನೀಕಾಂತ್

Update: 2020-12-25 18:18 GMT

ಹೊಸದಿಲ್ಲಿ, ಡಿ. 25: ರಕ್ತದೊತ್ತಡದಲ್ಲಿ ತೀವ್ರ ಏರಿಳಿತ ಉಂಟಾದ ಹಿನ್ನೆಲೆಯಲ್ಲಿ ನಟ ರಜನಿಕಾಂತ್ ಅವರನ್ನು ಹೈದರಾಬಾದ್‌ನಲ್ಲಿರುವ ಆಸ್ಪತ್ರೆಯಲ್ಲಿ ಶುಕ್ರವಾರ ದಾಖಲಿಸಲಾಗಿದೆ.

 ‘ಅನ್ನಾತೆ’ ಚಿತ್ರದ ಚಿತ್ರೀಕರಣದ ಹಿನ್ನೆಲೆಯಲ್ಲಿ ರಜನಿಕಾಂತ್ ಅವರು ಹೈದರಾಬಾದ್‌ನಲ್ಲಿದ್ದರು. ಆದರೆ, ಚಿತ್ರತಂಡದ ನಾಲ್ವರು ಸದಸ್ಯರು ಕೊರೋನ ಸೋಂಕಿಗೆ ಒಳಗಾದ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ರದ್ದು ಮಾಡಲಾಗಿತ್ತು ಎಂದು ಹೇಳಿಕೆ ತಿಳಿಸಿದೆ.

ರಜನಿಕಾಂತ್ ಅವರಿಗೆ ಕೊರೋನ ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್ ಬಂದಿದೆ ಎಂದು ಹೈದರಾಬಾದ್‌ನಲ್ಲಿರುವ ಅಪೊಲೊ ಆಸ್ಪತ್ರೆಯ ಹೇಳಿಕೆ ತಿಳಿಸಿದೆ.

‘‘ಅವರಿಗೆ ಕೊರೋನದ ಯಾವುದೇ ಲಕ್ಷಣ ಇರಲಿಲ್ಲ. ಅವರ ರಕ್ತದೊತ್ತಡದಲ್ಲಿ ಗಂಭೀರ ಏರಿಳಿತ ಕಂಡು ಬಂದಿತ್ತು. ಮುಂದಿನ ಪರೀಕ್ಷೆ ಅಗತ್ಯ ಇರುವುದರಿಂದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ರಕ್ತದೊತ್ತಡ ಸರಿಯಾಗುವ ವರೆಗೆ ಆಸ್ಪತ್ರೆಯಲ್ಲಿ ಅವರಿಗೆ ತಪಾಸಣೆ ನಡೆಸಲಾಗುತ್ತದೆ ಹಾಗೂ ನಿಕಟ ನಿಗಾ ಇರಿಸಲಾಗುತ್ತದೆ’’ ಎಂದು ಅಪೊಲೊ ಆಸ್ಪತ್ರೆಯ ಹೇಳಿಕೆ ತಿಳಿಸಿದೆ.

ರಕ್ತದೊತ್ತಡದಲ್ಲಿ ಏರಿಳಿತ ಹಾಗೂ ಬಳಲಿಕೆ ಹೊರತುಪಡಿಸಿದರೆ, ಅವರಲ್ಲಿ ಇತರ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿಕೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News