×
Ad

“ನೂತನ ಕೃಷಿ ಕಾಯ್ದೆಗಳನ್ನು ಒಂದು ವರ್ಷ ಜಾರಿಗೊಳಿಸಿ, ಪ್ರಯೋಜನವಿಲ್ಲದಿದ್ದರೆ ತಿದ್ದುಪಡಿಗೊಳಿಸಬಹುದು”

Update: 2020-12-25 16:06 IST

ಹೊಸದಿಲ್ಲಿ, ಡಿ.25: ಕೃಷಿ ಕಾಯ್ದೆಗಳು ಒಂದು ಅಥವಾ ಎರಡು ವರ್ಷ ಜಾರಿಯಾಗಲಿ. ರೈತರಿಗೆ ಇದು ಅನುಕೂಲವಾಗಿಲ್ಲ ಎಂದು ಕಂಡುಬಂದರೆ ಆಗ ಕಾಯ್ದೆಯಲ್ಲಿ ಸಂಭಾವ್ಯ ತಿದ್ದುಪಡಿಗೆ ಸರಕಾರ ಸಿದ್ಧ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರೈತರು ಮಾತುಕತೆಗೆ ಮುಂದಾದರೆ ಆಗ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು. ಸರಕಾರಕ್ಕೆ ರೈತರ ಬಗ್ಗೆ ಅಪಾರ ಗೌರವವಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

 ‘ಒಂದೆರಡು ವರ್ಷ ಇದನ್ನು ಪ್ರಾಯೋಗಿಕವಾಗಿ ಪ್ರಯತ್ನಿಸೋಣ ಮತ್ತು ರೈತರಿಗೆ ಅನುಕೂಲವಾಗಿಲ್ಲ ಎಂದು ಕಂಡುಬಂದರೆ ಸರಕಾರ ಸಾಧ್ಯವಿರುವ ಎಲ್ಲಾ ತಿದ್ದುಪಡಿಗೆ ಸಿದ್ಧವಾಗಿದೆ. ಮಾತುಕತೆಯ ಮೂಲಕ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದು. ರೈತರೊಂದಿಗೆ ನಡೆಯುತ್ತಿರುವ ಮಾತುಕತೆ ಮುಂದುವರಿಯಬೇಕೆಂದು ಪ್ರಧಾನಿ ಬಯಸುತ್ತಿದ್ದಾರೆ. ಪ್ರತಿಭಟನಾ ನಿರತ ರೈತರು ಕೃಷಿ ಕಾಯ್ದೆಗಳ ಬಗ್ಗೆ ಸಂವಾದಕ್ಕೆ ಬರಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಧರಣಿ ಮುಷ್ಕರ ನಡೆಸುತ್ತಿರುವವರು ರೈತರು ಮತ್ತು ರೈತರ ಮಕ್ಕಳು. ಸರಕಾರಕ್ಕೆ ರೈತರ ಬಗ್ಗೆ ಅಗಾಧ ಗೌರವವಿದೆ ’ ಎಂದು ರಾಜನಾಥ್ ಸಿಂಗ್ ಮನವಿ ಮಾಡಿಕೊಂಡಿದ್ಧಾರೆ.

     ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ಮತ್ತು ಪ್ರತಿಪಕ್ಷ ಪ್ರತಿಭಟನೆ ನಡೆಸುತ್ತಿರುವಂತೆಯೇ, ಕೃಷಿ ಕಾಯ್ದೆಯಿಂದ ರೈತರಿಗೆ ಆಗುವ ಅನುಕೂಲದ ಮಾಹಿತಿ ನೀಡಲು ಬಿಜೆಪಿ ದೇಶದಾದ್ಯಂತ 100 ಸುದ್ಧಿಗೋಷ್ಟಿ ಹಾಗೂ 700 ಸಭೆಗಳನ್ನು ಆಯೋಜಿಸಿದೆ. ಇದರ ಅಂಗವಾಗಿ ದಿಲ್ಲಿಯಲ್ಲಿ ನಡೆದ ರ್ಯಾಲಿಯಲ್ಲಿ ರಾಜನಾಥ್ ಪಾಲ್ಗೊಂಡು ಮಾತನಾಡಿದರು. ಈ ಮಧ್ಯೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 9 ಕೋಟಿಗೂ ಅಧಿಕ ರೈತರಿಗೆ 18,000 ಕೋಟಿ ರೂ. ನಿಧಿಯನ್ನು ಪ್ರಧಾನಿ ಮೋದಿ ಶುಕ್ರವಾರ ಬಿಡುಗಡೆಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News