×
Ad

ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ,ಕಕ್ಷಿದಾರರಿಗೆ ಬೆದರಿಕೆಯೊಡ್ಡಿದ್ದಾರೆ:ದಿಲ್ಲಿ ದಂಗೆ ಆರೋಪಿಗಳ ವಕೀಲ ಪ್ರಾಚಾ

Update: 2020-12-25 17:57 IST

ಹೊಸದಿಲ್ಲಿ,ಡಿ.25 : ಈಶಾನ್ಯ ದಿಲ್ಲಿ ದಂಗೆಗಳಿಗೆ ಸಂಬಂಧಿಸಿದ ಹಲವಾರು ಪ್ರಕರಣಗಳಲ್ಲಿ ಪ್ರತಿವಾದಿಗಳ ಪರ ವಕೀಲರಾಗಿರುವ ಮೆಹಮೂದ್ ಪ್ರಾಚಾ ಅವರು ಗುರುವಾರ ತನ್ನ ಕಚೇರಿಯಲ್ಲಿ 15 ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದ್ದ ದಿಲ್ಲಿ ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ದಾಳಿ ಕಾರ್ಯಾಚರಣೆಯು ತಂಡವು ನಿರೀಕ್ಷಿಸಿದ್ದನ್ನು ನೀಡಲು ವಿಫಲಗೊಂಡಾಗ ಪೊಲೀಸರು ತನ್ನ ಮತ್ತು ತನ್ನ ಕೆಲವು ಸಹೋದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ್ದರು ಎಂದು ಪ್ರಾಚಾ ಶುಕ್ರವಾರ ಸುದ್ದಿಸಂಸ್ಥೆಗೆ ತಿಳಿಸಿದರು.

 ಗುರುವಾರ ಅಪರಾಹ್ನ 2:30ರ ಸುಮಾರಿಗೆ ದಿಲ್ಲಿಯ ನಿಝಾಮುದ್ದೀನ್ (ಪೂರ್ವ)ನಲ್ಲಿರುವ ಪ್ರಾಚಾರ ಕಾನೂನು ಸಂಸ್ಥೆ ‘ಲೀಗಲ್ ಎಕ್ಸಿಸ್ ’ಗೆ ಆಗಮಿಸಿದ್ದ ವಿಶೇಷ ಘಟಕದ ಅಧಿಕಾರಿಗಳು ಶುಕ್ರವಾರ ನಸುಕಿನ ಮೂರು ಗಂಟೆಗೆ ಅಲ್ಲಿಂದ ಮರಳಿದ್ದಾರೆ. ‘ದಾಳಿ ನಡೆಸಿದ್ದ ಅಧಿಕಾರಿಗಳು ತಾವೇನನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದೇವೆ ಎಂಬ ಬಗ್ಗೆ ನಮಗೇನೂ ಮಾಹಿತಿ ನೀಡದೆ ವಿವಿಧ ದಾಖಲೆಗಳನ್ನು ಪರಿಶೀಲಿಸಲು ನಮ್ಮ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಿದ್ದರು. ತಂಡವು ತನ್ನ ಬೇಡಿಕೆಗಳನ್ನು ಆಗಾಗ್ಗೆ ಬದಲಿಸುತ್ತಲೇ ಇತ್ತು ಮತ್ತು ಪ್ರತಿಬಾರಿಯೂ ಅದು ಕೇಳಿದ್ದ ವಿವರಗಳನ್ನು ನಾವು ಒದಗಿಸಿದಾಗ ರಾಜೀವ್ ಎಂದು ಹೇಳಿಕೊಂಡಿದ್ದ ತನಿಖಾಧಿಕಾರಿ ಹೊರಗೆ ತೆರಳಿ ಯಾರೊಂದಿಗೋ ಫೊನ್‌ನಲ್ಲಿ ಮಾತನಾಡುತ್ತಿದ್ದರು ಮತ್ತು ಮರಳಿ ಬಂದು,ತನಗೆ ತೃಪ್ತಿಯಾಗಿಲ್ಲ,ಇನ್ನಷ್ಟು ದಾಖಲೆಗಳನ್ನು ತಾನು ನೋಡಬೇಕಿದೆ ಎಂದು ತಿಳಿಸುತ್ತಿದ್ದರು ಎಂದು ಪ್ರಾಚಾ ಹೇಳಿದರು.

ದಿಲ್ಲಿ ಪೊಲೀಸರು ವಕೀಲರೋರ್ವರನ್ನು ಬೆದರಿಸಲು ಮತ್ತು ಪ್ರಕರಣದಲ್ಲಿ ನ್ಯಾಯವನ್ನು ವಂಚಿಸಲು ಹೇಗೆ ಪ್ರಯತ್ನಿಸುತ್ತಿದ್ದಾರೆ ಎನ್ನುವುದನ್ನು ಎಲ್ಲರೂ ನೋಡಬೇಕೆಂದು ತಾನು ಬಯಸಿದ್ದೆ ಮತ್ತು ಇದೇ ಕಾರಣದಿಂದ ಪೊಲೀಸರೊಂದಿಗೆ ತಾನು ಸಹಕರಿಸಿದ್ದೆ ಎಂದು ಹೇಳಿದ ಪ್ರಾಚಾ,‘ತನಿಖಾಧಿಕಾರಿ ತಾನು ರಾಜೀವ್ ಎಂದು ನಮ್ಮೊಂದಿಗೆ ಹೇಳಿಕೊಂಡಿದ್ದರಾದರೂ ದಾಳಿಗೆ ಸಂಬಂಧಿಸಿದ ದಾಖಲೆಗೆ ಬೇರೆ ಹೆಸರಿನಲ್ಲಿ ಸಹಿ ಮಾಡಿದ್ದರು. ಆಗಲೇ,ಏನೋ ಮಸಲತ್ತು ನಡೆದಿದೆ ಮತ್ತು ಇದು ಮಾಮೂಲಿ ದಾಳಿಯಲ್ಲ ಎನ್ನುವುದು ನನಗೆ ಹೊಳೆದಿದ್ದರಿಂದ ತಕ್ಷಣ ಸ್ಥಳೀಯ ಪೊಲೀಸರಿಗೆ ಕರೆ ಮಾಡಲು ಮತ್ತು ದಾಳಿ ತಂಡದ ವಿರುದ್ಧ ದೂರು ದಾಖಲಿಸಲು ನನ್ನ ಸಹೋದ್ಯೋಗಿಗಳಿಗೆ ಸೂಚಿಸಿದ್ದೆ ’ಎಂದರು.

ವಿಶೇಷ ಘಟಕದ ತಂಡದೊಂದಿಗೆ ಪೊಲೀಸ್ ಇಲಾಖೆಗೆ ಸೇರದ ಇಬ್ಬರು ವ್ಯಕ್ತಿಗಳು ಬಂದಿದ್ದರು. ನಾವು ಅವರನ್ನು ಪ್ರಶ್ನಿಸಲು ಪ್ರಯತ್ನಿಸಿದಾಗ ಅವರು ಅಲ್ಲಿಂದ ಪರಾರಿಯಾಗಿದ್ದರು ಎಂದು ಪ್ರಾಚಾ ಆರೋಪಿಸಿದರು.

ಪ್ರಕರಣವೊಂದರ ತನಿಖೆಗಾಗಿ ಪ್ರಾಚಾರ ಸ್ವಾಧೀನದಲ್ಲಿರುವ ಆಕ್ಷೇಪಾರ್ಹ ದಾಖಲೆಗಳನ್ನು ಜಾಲಾಡುವ ಅಗತ್ಯವಿದೆ ಎಂಬ ಪೊಲೀಸರ ಕೋರಿಕೆಯ ಮೇರೆಗೆ ಸ್ಥಳೀಯ ನ್ಯಾಯಾಲಯವೊಂದು ಡಿ.22ರಂದು ಪ್ರಾಚಾ ವಿರುದ್ಧ ಸರ್ಚ್ ವಾರಂಟ್ ಹೊರಡಿಸಿತ್ತು.

ತಮಗೆ ಕೇವಲ ಮೂರು ದಾಖಲೆಗಳು ಬೇಕಿವೆ ಎಂದು ಆರಂಭದಲ್ಲಿ ತಿಳಿಸಿದ್ದ ತನಿಖಾಧಿಕಾರಿ ದಾಳಿ ಶೋಧ ಕಾರ್ಯಾಚರಣೆ ಆರಂಭಗೊಂಡ ಬೆನ್ನಿಗೇ ತನ್ನ ಲ್ಯಾಪ್ ಟಾಪ್ ಮತ್ತು ಕಚೇರಿಯ ಇತರ ಕಂಪ್ಯೂಟರ್‌ಗಳನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದರು. ಆದರೆ ತಾನು ಅದಕ್ಕೆ ಅವಕಾಶ ನೀಡಿರಲಿಲ್ಲ ಎಂದು ಪ್ರಾಚಾ ತಿಳಿಸಿದರು.

ಪ್ರಾಚಾ ಕಕ್ಷಿದಾರರ ಪರವಾಗಿ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆ ಮತ್ತು ದಂಗೆ ಪ್ರಕರಣಗಳ ಕೆಲವು ಸಾಕ್ಷಿಗಳಿಗೆ ಮತ್ತು ಬಲಿಪಶುಗಳಿಗೆ ತಾನು ತಿಳಿಸಿದಂತೆಯೇ ಹೇಳುವಂತೆ ಬೋಧಿಸಿದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಆರೋಪಿಸಿದ್ದರು.

ಪೊಲೀಸರು ತನ್ನ ಕೆಲವು ಕಕ್ಷಿದಾರರಿಗೆ ಕರೆಗಳನ್ನು ಮಾಡಿ ಪ್ರಕರಣಗಳನ್ನು ಹಿಂದೆಗೆದುಕೊಳ್ಳುವಂತೆ ಬೆದರಿಕೆಯೊಡ್ಡುತ್ತಿದ್ದಾರೆ. ನಿಮ್ಮ ವಕೀಲರನ್ನು ಜೈಲಿಗೆ ಹಾಕುತ್ತೇವೆ,ಅಗತ್ಯವಾದರೆ ಅವರನ್ನು ಎನ್‌ಕೌಂಟರ್ ಸಹ ಮಾಡುತ್ತೇವೆ ಎಂದು ಪೊಲೀಸರು ಧಮಕಿ ಹಾಕುತ್ತಿದ್ದಾರೆ ಎಂದೂ ಪ್ರಾಚಾ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News