ಶಕೀಲಾ: ಇಲ್ಲಿ ನಿರ್ದೇಶಕನೇ ಶಕೀಲಾ ಪರ ವಕೀಲ..!

Update: 2020-12-26 19:30 GMT

ಈ ಹಿಂದೆ ಹಿಂದಿಯಲ್ಲಿ ಸಂಜಯ್ ದತ್ ಬಗ್ಗೆ ಒಂದು ಸಿನೆಮಾ ಬಂದಿದ್ದು ನೆನಪಿರಬಹುದು. ಅದರಲ್ಲಿ ಸಂಜಯ್ ದತ್ ಕುರಿತಾದ ಎಲ್ಲ ಆರೋಪಗಳಿಗೆ ಸಮರ್ಥನೆಯ ಉತ್ತರ ನೀಡುವ ಪ್ರಯತ್ನ ನಡೆದಿತ್ತು. ಶಕೀಲಾ ಕೂಡ ಒಂದು ರೀತಿಯಲ್ಲಿ ಅದೇ ಆಗಿದೆ. ಅಲ್ಲಿ ಸಂಜಯ್ ಪಾತ್ರ ಮಾಡಿದ ರಣಬೀರ್ ಕಪೂರ್ ಆತನನ್ನೇ ಹೋಲುತ್ತಿದ್ದರು. ಇಲ್ಲಿ ಶಕೀಲಾಗೂ ರಿಚಾ ಚಡ್ಡಾಗೂ ಹೋಲಿಕೆಗಳೇ ಇಲ್ಲ. ಹಾಗಾಗಿ ಇದನ್ನು ಶಕೀಲಾ ಬದುಕಿನ ಸಿನೆಮಾ ಎನ್ನುವುದನ್ನು ಮರೆತೇ ವೀಕ್ಷಿಸಬಹುದು.

ಬಯೋಪಿಕ್‌ನಲ್ಲಿ ನಟಿಸುವ ವ್ಯಕ್ತಿಗೂ ನಿಜವಾದ ವ್ಯಕ್ತಿಗೂ ನೋಟದಲ್ಲಿ ಹೋಲಿಕೆ ಇಲ್ಲ ಎಂದರೆ ಒಪ್ಪಬಹುದೇನೋ. ಆದರೆ ಅವರ ಬದುಕಿಗೂ ಚಿತ್ರಕ್ಕೂ ಅಂಥ ದೊಡ್ಡ ಹೋಲಿಕೆಗಳಿಲ್ಲ ಎಂದಾಗ, ಹಾಗಾದರೆ ಅದನ್ನು ಬಯೋಪಿಕ್ ಎನ್ನುವ ಅಗತ್ಯವೇನು ಅನಿಸದಿರದು. ಶಕೀಲಾ ಚಿತ್ರದ ಮಾಧ್ಯಮಗೋಷ್ಠಿಗೆ ಬಂದಿದ್ದ ‘ಒರಿಜಿನಲ್ ಶಕೀಲಾ’ ಕೂಡ ‘ತಾನು ಅಶ್ಲೀಲ ಸಿನೆಮಾಗಳ ನಾಯಕಿಯಾಗಿದ್ದಕ್ಕೆ ಪಶ್ಚಾತಾಪ ಪಡುವುದಿಲ್ಲ’ ಎಂದಿದ್ದರು. ಆದರೆ ಈ ಚಿತ್ರ ಅನ್ಯಾಯಕ್ಕೊಳಗಾದ ಯುವತಿಯೊಬ್ಬಳ ದಯನೀಯ ಪರಿಸ್ಥಿತಿಯನ್ನು ಹೇಳುವಂತಿದೆ. ಅಲ್ಲಿಗೆ ನಿಜವಾದ ಶಕೀಲಾಗೂ ಚಿತ್ರಕ್ಕೂ ಇರುವ ಸಾಮ್ಯತೆ ಕೊನೆಯಾಗುತ್ತದೆ. ಆರು ಮಂದಿ ಹೆಣ್ಣುಮಕ್ಕಳಲ್ಲಿ ಹಿರಿಯವಳು ಶಕೀಲಾ.

ಬಡತನದಲ್ಲಿ ಬೆಳೆದ ಹುಡುಗಿ ಶಾಲೆಗೆ ಹೋಗುತ್ತಿದ್ದ ದಿನಗಳಲ್ಲೇ ತಂದೆಗೆ ಪರಲೋಕದ ದಾರಿ. ಶಕೀಲಾ ತಲೆಗೆ ಕುಟುಂಬ ಕಾಯುವ ಜವಾಬ್ದಾರಿ. ಸಂಪಾದನೆ ತುತ್ತು ಅನ್ನಕ್ಕಷ್ಟೇ ಅಲ್ಲ; ಸ್ವತ್ತು ಮಾಡಿಡಲೂ ಬೇಕು ಎನ್ನುವಾಸೆ ತಾಯಿಗೆ. ತಾಯಿಯ ದುರಾಸೆಯಿಂದ ಅಶ್ಲೀಲ ಚಿತ್ರಗಳಿಗೆ ಶಕೀಲಾ ನಾಯಕಿ. ಈಕೆಯ ಯಶಸ್ಸು ಕಂಡು ಕರುಬುವವರಿಗಷ್ಟೇ ಈಕೆ ಖಳನಾಯಕಿ. ಇದು ನಮ್ಮ ಹೇಳಿಕೆಯಲ್ಲ; ಚಿತ್ರದ ಧೋರಣೆ. ಹಾಗಾಗಿ ಪುರಾಣದ ಪುಣ್ಯ ಸ್ತ್ರೀಯರಂತೆ ಶಕೀಲಾ ಅಗ್ನಿಯಲ್ಲಿದ್ದರೂ ಬೇಯದ ದಿವ್ಯಾತ್ಮ. ಅದನ್ನು ಪೂರಕವಾಗಿಸಲು ಮತ್ತೊಂದಷ್ಟು ಪಾತ್ರಗಳಿವೆ. ಅವುಗಳಲ್ಲಿ ಸಲೀಮ್ ಎನ್ನುವ ಕಾಲ್ಪನಿಕ ಸೂಪರ್ ಸ್ಟಾರ್ ಪಾತ್ರವೂ ಪ್ರಮುಖ. ಪಾತ್ರದ ಕ್ಲೀಷೆಗಳಾಚೆ ಚಿತ್ರ ನೋಡಿದ ಬಳಿಕವೂ ನಿಮಗೆ ಸಲೀಮ್ ನೆನಪಾದರೆ ಅದಕ್ಕೆ ಪಾತ್ರಧಾರಿ ಪಂಕಜ್ ತ್ರಿಪಾಠಿಯೇ ಕಾರಣ. ಶಕೀಲಾ ತಾಯಿಯ ಪಾತ್ರಧಾರಿ, ಬಾಲ್ಯದ ಶಕೀಲಾ ಪಾತ್ರ ಮಾಡಿರುವ ಕಾಜೋಲ್, ಪ್ರಿಯಕರನಾಗಿ ನಟಿಸಿರುವ ಮಲಯಾಳಂ ನಟ ರಾಜೀವ್, ನಿರ್ದೇಶಕನಾಗಿ ಕಾಣಿಸಿರುವ ಸಂದೀಪ್ ಮಲಾನಿ, ನಿರ್ಮಾಪಕನಾಗಿ ಸುಚೇಂದ್ರ ಪ್ರಸಾದ್ ಸೇರಿದಂತೆ ಪಾತ್ರಗಳಿಗೆ ಸೂಕ್ತ ಕಲಾವಿದರ ಆಯ್ಕೆಯಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ ಜಾಣ್ಮೆ ಪ್ರದರ್ಶಿಸಿದ್ದಾರೆ. ಆದರೆ ಒಂದು ಕಾಲಘಟ್ಟದ ಘಟನೆಯನ್ನು ಹೇಳುತ್ತಾ ಅದರಲ್ಲಿ ದಶಕಗಳ ಬದಲಾವಣೆಯನ್ನು ತೋರಿಸುವಲ್ಲಿ ಎಡವಿದ್ದಾರೆ.

ಅದಕ್ಕೆ ಮಾಧ್ಯಮಗಳು ಮತ್ತು ನಿರೂಪಕರನ್ನು ತೋರಿಸಿರುವ ರೀತಿಯೂ ಒಂದು ಉದಾಹರಣೆ. ಕಲಾವಿದರ ಉಡುಗೆ, ತೊಡುಗೆ ಮತ್ತು ಹಸಿರು ಪರಿಸರ, ಒಂದೆರಡು ಮಲಯಾಳಂ ಫಲಕಗಳನ್ನು ಹೊರತು ಪಡಿಸಿ ಚಿತ್ರದಲ್ಲಿ ಒಂದು ಪ್ರದೇಶವನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಎಡವಿದ್ದಾರೆ. ಚಿತ್ರದ ಸಬ್ಜೆಕ್ಟ್ ಎಲ್ಲ ಕಡೆಗೂ ಹೊಂದಿಸಬೇಕು ಎನ್ನುವ ಕಾರಣದಿಂದಲೇ ನಿರ್ದೇಶಕರು ಸ್ಥಳೀಯತೆಗೆ ಪ್ರಾಮುಖ್ಯತೆ ನೀಡಿರದೇ ಹೋಗಿರಬಹುದು! ಒಟ್ಟು ಚಿತ್ರವನ್ನು ಒಂದು ಘಟನೆಯಾಗಿ ನೋಡುವುದಾದರೆ ಬಡತನದಿಂದ ಅನಿವಾರ್ಯವಾಗಿ ಬಣ್ಣದ ಲೋಕಕ್ಕೆ ಬಂದು ಮೋಸ ಹೋಗುವ ಎಷ್ಟು ಕತೆಗಳನ್ನು ನಾವು ಕೇಳಿಲ್ಲ? ಅವುಗಳಲ್ಲಿ ಇದು ಕೂಡ ಒಂದು.

ಆದರೆ ಚಿತ್ರವನ್ನು ಅವುಗಳಿಗಿಂತ ಏನಾದರೂ ಸ್ವಲ್ಪ ವಿಭಿನ್ನವಾಗಿಸಿದ್ದರೆ ಅದು ಕಲಾವಿದರ ನಟನೆ, ಛಾಯಾಗ್ರಹಣದಲ್ಲಿರುವ ದೃಶ್ಯ ಸೌಂದರ್ಯ ಮತ್ತು ಮತ್ತೊಂದಷ್ಟು ಸಂಗೀತದ ಮಾಧುರ್ಯ ಮಾತ್ರ ಕಾರಣ. ಅದು ಬಿಟ್ಟು ಚಿಂತಿಸಬಹುದಾದ ಹೊಸ ವಿಚಾರಗಳೇನಿಲ್ಲ. ಚಿತ್ರದ ಕೊನೆಯಲ್ಲಿ ನೀಡುವ ಸಂದೇಶದಂತೆ ನಾಯಕಿಯಿಂದ ಒಂದು ಸಂಭಾಷಣೆ ಹೇಳಿಸಲಾಗಿದೆ. ಸಿನೆಮಾ ನೋಡಿ ಅತ್ಯಾಚಾರ ನಡೆಯುವುದಾದರೆ ಶುಕ್ರವಾರವಷ್ಟೇ ಅತ್ಯಾಚಾರ ನಡೆಯಬೇಕು ಎನ್ನುವಂಥ ಸಾಲುಗಳು ಅಲ್ಲಿವೆ! ನಿರ್ದೇಶಕರೇ, ಹಾಗಾದರೆ ಸಿನೆಮಾ ಶುಕ್ರವಾರದಂದು ಮಾತ್ರ ಚಿತ್ರಮಂದಿರಲ್ಲಿರುವುದೇ? ಅಶ್ಲೀಲ ಸಿನೆಮಾಗಳಲ್ಲಿ ನಟಿಸಿದ ಶಕೀಲಾರನ್ನು ಸಮರ್ಥಿಸಿ. ಆದರೆ ಸಿನೆಮಾ ಸಮಾಜದ ಮೇಲೆ ಪ್ರಭಾವ ಬೀರದು ಎನ್ನುವುದನ್ನು ಸಮರ್ಥಿಸಲಾಗದು. ಹಾಗಿದ್ದಲ್ಲಿ ಜಾಹೀರಾತು ವೀಡಿಯೊಗಳಿಗೆ ಕೋಟಿ ಸುರಿಯುವವರು ಇರುತ್ತಲೇ ಇರಲಿಲ್ಲವಲ್ಲ? ಒಟ್ಟಿನಲ್ಲಿ ಜೀವನ ಚರಿತ್ರೆಯೇ ಆದರೂ ಅದನ್ನು ತಮ್ಮ ಕಮರ್ಷಿಯಲ್ ಸಿನಿಮೀಯ ಕಣ್ಣಿನಲ್ಲೇ ನೋಡಿದ್ದಾರೆ ಇಂದ್ರಜಿತ್. ಅದೇ ಕಣ್ಣುಗಳೊಂದಿಗೆ ಪ್ರೇಕ್ಷಕರು ಕೂಡ ಚಿತ್ರಮಂದಿರಕ್ಕೆ ಹೋದರೆ ಉತ್ತಮ!

ಚಿತ್ರ: ಶಕೀಲಾ
ತಾರಾಗಣ: ರಿಚಾ ಚಡ್ಡ, ಪಂಕಜ್ ತ್ರಿಪಾಠಿ, ಎಸ್ತರ್ ನೊರೊನ್ಹಾ
ನಿರ್ದೇಶನ: ಇಂದ್ರಜಿತ್ ಲಂಕೇಶ್

ನಿರ್ಮಾಣ: ಸ್ಯಾಮಿ ನನ್ವಾನಿ, ಸಾಹಿಲ್ ನನ್ವಾನಿ 

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News