ಕೇಂದ್ರ-ರಾಜ್ಯ ಜಟಾಪಟಿಗೆ ಕಾರಣವಾದ ಐಪಿಎಸ್ ಅಧಿಕಾರಿಗೆ ಭಡ್ತಿ ನೀಡಿದ ಮಮತಾ ಸರಕಾರ

Update: 2020-12-29 09:06 GMT

ಕೋಲ್ಕತಾ: ಈ ತಿಂಗಳಾರಂಭದಲ್ಲಿ ಬಿಜೆಪಿ ಅಧ್ಯಕ್ಷ ನಡ್ಡಾ ಅವರ ಬೆಂಗಾವಲು ವಾಹನ ಮೇಲೆ ದಾಳಿ ನಡೆದ ಬಳಿಕ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜಟಾಪಟಿಗೆ ಕಾರಣವಾಗಿದ್ದ ಮೂವರು ಭಾರತೀಯ ಪೊಲೀಸ್ ಸೇವೆ(ಐಪಿಎಸ್)ಅಧಿಕಾರಿಗಳ ಪೈಕಿ ಒಬ್ಬರನ್ನು ಮಮತಾ ಬ್ಯಾನರ್ಜಿ ಸರಕಾರ ಭಡ್ತಿ ನೀಡಿದ್ದು, ಇನ್ನೋರ್ವ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ.

ಪಶ್ಚಿಮಬಂಗಾಳ ಸರಕಾರವು ಸೋಮವಾರ ಹಲವು ಐಪಿಎಸ್ ಅಧಿಕಾರಿಗಳನ್ನು ಭಡ್ತಿ ಹಾಗೂ ವರ್ಗಾವಣೆ ಮಾಡಿದೆ. ಈ ಪಟ್ಟಿಯಲ್ಲಿ ರಾಜೀವ್ ಮಿಶ್ರಾ ಹಾಗೂ ಭೋಲನಾಥ್ ಪಾಂಡೆ ಅವರ ಹೆಸರಿದೆ.

ಡಿ.20ರಂದು ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆದ ಬಳಿಕ ಕೇಂದ್ರ ಗೃಹ ಸಚಿವಾಲಯವು ಪಶ್ಚಿಮಬಂಗಾಳದ ಮೂವರು ಐಪಿಎಸ್ ಅಧಿಕಾರಿಗಳನ್ನು ಐದು ವರ್ಷಗಳ ಕಾಲ ಕೇಂದ್ರದ ಸೇವೆಗೆ ನಿಯೋಜಿಸಿತ್ತು. ಈ ಅಧಿಕಾರಿಗಳು ನಡ್ಡಾ ಭದ್ರತೆಯ ಹೊಣೆ ಹೊತ್ತಿದ್ದರು.

ಮಮತಾ ಸರಕಾರ ಈ ಮೂವರು ಅಧಿಕಾರಿಗಳನ್ನು ಕೇಂದ್ರದ ಸೇವೆಗೆ ಬಿಟ್ಟುಕೊಡಲು ನಿರಾಕರಿಸಿತ್ತು. ಇದರಿಂದಾಗಿ ರಾಜ್ಯ-ಕೇಂದ್ರ ಸರಕಾರದ ಮಧ್ಯೆಜಟಾಪಟಿ ನಡೆದಿತ್ತು. ಕೇಂದ್ರ ಸರಕಾರದ ಆದೇಶ ಅಸಾಂವಿಧಾನಿಕ ಹಾಗೂ ಸಂಪೂರ್ಣ ಅಸ್ವೀಕಾರಾರ್ಹ ಎಂದು ಮಮತಾ ಟ್ವೀಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News