ರಸ್ತೆ ಮಧ್ಯೆ ಹಾಡುಹಗಲೇ ಹೂಮಾರಾಟಗಾರನ ಥಳಿಸಿ ಹತ್ಯೆ; ವೀಡಿಯೋ ವೈರಲ್
ಗಝಿಯಾಬಾದ್: ಗಝಿಯಾಬಾದ್‍ನ ಲೋನಿ ಪ್ರದೇಶದಲ್ಲಿ ಹಾಡುಹಗಲೇ 21 ವರ್ಷದ ಹೂಮಾರಾಟಗಾರ ಯುವಕನೊಬ್ಬನನ್ನು ಇಬ್ಬರು ವ್ಯಕ್ತಿಗಳು ಥಳಿಸಿ ಸಾಯಿಸಿದ್ದಾರೆ. ವ್ಯಾಪಾರ ವಿಚಾರದಲ್ಲಿ ವೈಷಮ್ಯವೇ ಈ ಕೊಲೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೀಡಾದ ಯುವಕನನ್ನು ಅಜಯ್ ಎಂದು ಗುರುತಿಸಲಾಗಿದೆ. ಘಟನೆಯ ವೀಡಿಯೋ ವೈರಲ್ ಆಗಿದೆ.
ಲೋನಿ ಪ್ರದೇಶದಲ್ಲಿ ಅಜಯ್ ಸೋಮವಾರ ಅಪರಾಹ್ನ ಆಟೋರಿಕ್ಷಾದಲ್ಲಿ ತೆರಳುತ್ತಿದ್ದಾಗ ಆರೋಪಿಗಳಾದ ಅಮಿತ್ ಹಾಗೂ ಗೋವಿಂದ್ ಆತನನ್ನು ತಡೆದು ಸ್ಟೀಲ್ ರಾಡುಗಳಿಂದ ಆತನಿಗೆ ಥಳಿಸಿ ಗಂಭೀರ ಗಾಯಗೊಳಿಸಿದ್ದಾರೆ. ಆತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಅದಾಗಲೇ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದರು.
ಲೋನಿ ಪ್ರದೇಶದ ಮಹಾಕಾಳಿ ಮಂದಿರದ ಬಳಿ ಗೋವಿಂದ್ ಕಳೆದ ಹತ್ತು ವರ್ಷಗಳಿಂದ ಹೂ ಮಾರಾಟ ಅಂಗಡಿ ಹೊಂದಿದ್ದ. ಆತನ ಅಂಗಡಿಯ ಎದುರಿಗೆ ಅಜಯ್ ಲಾಕ್ ಡೌನ್‍ಗೆ ಮುನ್ನ ತನ್ನ ಹೂವಿನ ಅಂಗಡಿ ತೆರೆದಿದ್ದೇ ಈ ವೈಷಮ್ಯಕ್ಕೆ ಕಾರಣವೆನ್ನಲಾಗಿದೆ.
ಇಬ್ಬರೂ ಇದೇ ವಿಚಾರದಲ್ಲಿ ಈ ಹಿಂದೊಮ್ಮೆ ಜಗಳವಾಡಿದ ನಂತರ ಪ್ರಕರಣ ಠಾಣೆಯ ಮೆಟ್ಟಿಲೇರಿದ್ದರೂ ಇಬ್ಬರೂ ಯಾವುದೇ ದೂರು ದಾಖಲಿಸದೆ ತಾವೇ ಸಮಸ್ಯೆ ಇತ್ಯರ್ಥಗೊಳಿಸಿದ್ದರು.