"ನೀವು ಕೆಲ ಶಾಸಕರನ್ನು ಖರೀದಿಸಬಹುದು, ಅದರೆ ಟಿಎಂಸಿಯನ್ನು ಖರೀದಿಸಲು ಸಾಧ್ಯವಿಲ್ಲ"

Update: 2020-12-29 13:09 GMT

ಹೊಸದಿಲ್ಲಿ : "ನೀವು ಕೆಲವು ಶಾಸಕರನ್ನು ಖರೀದಿಸಬಹುದು, ಆದರೆ ನಿಮಗೆ ಟಿಎಂಸಿಯನ್ನು ಖರೀದಿಸಲು ಸಾಧ್ಯವಿಲ್ಲ,'' ಎಂದು ಬೋಲ್ಪುರ್ ಎಂಬಲ್ಲಿ ಮಂಗಳವಾರ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜನರು ತಮ್ಮ ಪಕ್ಷವನ್ನು ಬೆಂಬಲಿಸುವ ತನಕ ಪಕ್ಷಾಂತರ ತಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಅವರು ಹೇಳಿದರು.

ವಿಶ್ವಭಾರತಿ ವಿವಿ ಉಪಕುಲಪತಿ ಬಿದ್ಯುತ್ ಚಕ್ರವರ್ತಿ ಅವರನ್ನು 'ಬಿಜೆಪಿ ವ್ಯಕ್ತಿ' ಎಂದು ಬಣ್ಣಿಸಿದ ಮಮತಾ. ಅವರು ವಿವಿಯೊಳಗೆ ವಿಭಜನಾತ್ಮಕ ಹಾಗೂ ಕೋಮುವಾದ ರಾಜಕಾರಣಕ್ಕೆ ಆಸ್ಪದ ನೀಡಿ ಉನ್ನತ ಪರಂಪರೆಯ ಸಂಸ್ಥೆಯೊಂದನ್ನು ನಾಶಗೊಳಿಸುತ್ತಿದ್ದಾರೆ ಎಂದು ಅರೋಪಿಸಿದರು.

"ಬಂಗಾಳದ ಸಂಸ್ಕೃತಿಯನ್ನು ನಾಶಪಡಿಸಲು ಸಂಚು ಹೂಡಲಾಗುತ್ತಿದೆ. ಹಿಂಸೆಯ ರಾಜಕಾರಣವನ್ನು ನಿಲ್ಲಿಸಿ. ವಿಶ್ವ ಭಾರತಿಯಲ್ಲಿ ಕೋಮು ರಾಜಕಾರಣವನ್ನು ನಡೆಸುವ ಯತ್ನಗಳನ್ನು ಗಮನಿಸಿದಾಗ ಬೇಸರವಾಗುತ್ತದೆ,'' ಎಂದು ಮಮತಾ ಹೇಳಿದರು.

“ಮಹಾತ್ಮ ಗಾಂಧಿ ಮತ್ತು ದೇಶದ ಇತರ ಮಹಾನ್ ನಾಯಕರುಗಳನ್ನು ಗೌರವಿಸದ ಮಂದಿ ‘ಸೋನಾರ್ ಬಾಂಗ್ಲಾ' ನಿರ್ಮಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಠಾಗೋರ್ ಅವರು ಸೋನಾರ್ ಬಾಂಗ್ಲಾವನ್ನು ಹಲವಾರು ದಶಕಗಳ ಹಿಂದೆಯೇ ನಿರ್ಮಿಸಿದ್ದರು. ಈಗ ನಾವು ಅದನ್ನು ಬಿಜೆಪಿಯ ಮತೀಯ ದಾಳಿಯಿಂದ ರಕ್ಷಿಸಬೇಕಿದೆ,'' ಎಂದು ಅವರು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News