×
Ad

ಕೃಷಿ ಕಾನೂನು ವಿರೋಧಿ ಪ್ರತಿಭಟನಾಕಾರರಿಗೆ ಲಾಠಿ ಏಟು: ಗಾಯಾಳುಗಳು ಆಸ್ಪತ್ರೆಗೆ ದಾಖಲು

Update: 2020-12-29 19:36 IST

ಪಾಟ್ನಾ,ಡಿ.29: ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಮಂಗಳವಾರ ಇಲ್ಲಿಯ ರಾಜಭವನಕ್ಕೆ ಜಾಥಾದಲ್ಲಿ ತೆರಳುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಹಲವಾರು ಜನರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ಪ್ರತಿಭಟನಾಕಾರ ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ವಿವಿಧ ರೈತ ಮತ್ತು ಎಡಪಂಥೀಯ ಸಂಘಟನೆಗಳು ಸೇರಿದಂತೆ ಸಾವಿರಾರು ಪ್ರತಿಭಟನಾಕಾರರ ಜಾಥಾದಿಂದಾಗಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ರ‍್ಯಾಲಿಯ ಆರಂಭ ಸ್ಥಳವಾಗಿದ್ದ ಗಾಂಧಿ ಮೈದಾನಕ್ಕೆ ಒಂದೇ ದ್ವಾರದ ಮೂಲಕ ಪ್ರವೇಶಾವಕಾಶ ಕಲ್ಪಿಸಿದ್ದನ್ನು ಪ್ರತಿಭಟನಾ ಕಾರರು ಆಕ್ಷೇಪಿಸಿದ್ದು,ಈ ಸಂದರ್ಭ ಅವರ ಹಾಗೂ ಪೊಲೀಸರು ಮತ್ತು ಅಧಿಕಾರಿಗಳ ನಡುವೆ ಹೊಯ್‌ಕೈ ಕೂಡ ನಡೆದಿತ್ತು. ನೂಕುನುಗ್ಗಲಿನ ಸ್ಥಿತಿಯನ್ನು ತಪ್ಪಿಸಲು ನಿರ್ಬಂಧವನ್ನು ಹೇರಲಾಗಿತ್ತು ಎಂದು ಪೊಲೀಸರು ತಿಳಿಸಿದ್ದರೆ,ಅದು ತಮ್ಮ ಧ್ವನಿಯನ್ನಡಗಿಸುವ ಪ್ರಯತ್ನವಾಗಿತ್ತು ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಗಾಂಧಿ ಮೈದಾನದಿಂದ ಸುಮಾರು ಒಂದೂವರೆ ಕಿ.ಮೀ.ದೂರದ ಡಾಕ್ ಬಂಗಲೆ ಕ್ರಾಸಿಂಗ್ ಬಳಿ ಜಾಥಾ ತಲುಪಿದಾಗ ಅಲ್ಲಿ ನಿಯೋಜಿತರಾಗಿದ್ದ ಅಧಿಕಾರಿಗಳು ಪ್ರತಿಭಟನಾಕಾರರನ್ನು ತಡೆದು ಮುಂದಕ್ಕೆ ತೆರಳಲು ಅವಕಾಶವನ್ನು ನಿರಾಕರಿಸಿದರು. ಈ ಸಂದರ್ಭ ಪ್ರತಿಭಟನಾಕಾರರೊಂದಿಗೆ ವಾಗ್ವಾದ ನಡೆದಿದ್ದು,ಭಾರೀ ಸಂಖ್ಯೆಯಲ್ಲಿದ್ದ ಪೊಲೀಸರು ಜಾಥಾ ಮುಂದುವರಿಯುವುದನ್ನು ತಡೆಯಲು ಲಾಠಿ ಪ್ರಹಾರವನ್ನು ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News