ಸ್ಟಾಂಪ್‌ನಲ್ಲಿ ಛೋಟಾ ರಾಜನ್, ಮುನ್ನಾ ಬಜರಂಗಿ ಫೋಟೋ: ತನಿಖೆಗೆ ಆಗ್ರಹ
ಲಕ್ನೊ, ಡಿ.29: ಅಂಚೆ ಇಲಾಖೆಯು ತನ್ನ ಸೇವೆಯನ್ನು ಜನಪ್ರಿಯಗೊಳಿಸಲು ಆರಂಭಿಸಿರುವ ‘ನನ್ನ ಸ್ಟಾಂಪ್’ ಯೋಜನೆಯಲ್ಲಿ ಕಾನ್ಪುರದ ಅಂಚೆ ಕಚೇರಿಯೊಂದು ಕುಖ್ಯಾತ ಕ್ರಿಮಿನಲ್‌ಗಳಾದ ಛೋಟಾ ರಾಜನ್ ಮತ್ತು ಮುನ್ನಾ ಬಜರಂಗಿಯ ಫೋಟೋ ಇರುವ ಅಂಚೆ ಚೀಟಿಗಳನ್ನು ಬಿಡುಗಡೆಗೊಳಿಸಿದ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಕಾನ್ಪುರ ಅಂಚೆವಿಭಾಗದ ಹೇಳಿಕೆ ತಿಳಿಸಿದೆ.
‘ಮೈ ಸ್ಟಾಂಪ್’ ಯೋಜನೆಯಡಿ ಯಾವುದೇ ವ್ಯಕ್ತಿ ತನ್ನ ಫೋಟೋ ಹಾಗೂ ಗುರುತಿನ ಚೀಟಿ ನೀಡಿ ಅಂಚೆಕಚೇರಿಯಿಂದ ತನ್ನ ಫೋಟೋ ಇರುವ ಅಂಚೆಚೀಟಿಯನ್ನು ಪಡೆಯಬಹುದು. ಇದಕ್ಕೆ ನಿರ್ದಿಷ್ಟ ಶುಲ್ಕ ಪಾವತಿಸಬೇಕು. ಗುರುತಿನ ಚೀಟಿಯನ್ನು ಪರಿಶೀಲಿಸಿದ ಬಳಿಕ ಅಂಚೆಕಚೇರಿ ಸ್ಟಾಂಪನ್ನು ಒದಗಿಸುತ್ತದೆ. ಆದರೆ ಈ ಪ್ರಕರಣದಲ್ಲಿ ‘ಮೈ ಸ್ಟಾಂಪ್’ ವಿಭಾಗದ ಸಿಬಂದಿಯಿಂದ ಲೋಪವಾಗಿದೆ ಎಂದು ಪೋಸ್ಟ್‌ಮಾಸ್ಟರ್ ಜನರಲ್ ವಿಕೆ ವರ್ಮ ಹೇಳಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬ 5 ರೂ. ಮುಖಬೆಲೆಯ ಸ್ಟಾಂಪ್ ಮುದ್ರಿಸಲು ಬೇಡಿಕೆ ಸಲ್ಲಿಸಿ 600 ರೂ. ಪಾವತಿಸಿದ್ದಾನೆ. ಆತ ನೀಡಿದ ಫೋಟೋವನ್ನು ಸರಿಯಾಗಿ ಗಮನಿಸದ ಕಾರಣ ಈ ಪ್ರಮಾದವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅಂಚೆಚೀಟಿ ವಿಭಾಗದ ಅಧಿಕಾರಿ ರಜನೀಶ್ ಕುಮಾರ್ ದೋಷಿ ಎಂದು ಕಂಡುಬಂದಿದ್ದು ಅವರನ್ನು ಅಮಾನತುಗೊಳಿಸಲಾಗಿದೆ. ಇತರ ಕೆಲವು ಸಿಬಂದಿಗಳಿಗೂ ನೋಟಿಸ್ ಕಳುಹಿಸಲಾಗಿದೆ. ಜೊತೆಗೆ, ಅಂಚೆಚೀಟಿ ಮುದ್ರಿಸಲು ಬೇಡಿಕೆಯಿತ್ತ ವ್ಯಕ್ತಿಯ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ ಎಂದವರು ಹೇಳಿದ್ದಾರೆ.