×
Ad

''ಕೃಷಿ ಕಾನೂನು ಜಾರಿಗೆ ಮುನ್ನ ಸರಕಾರ ರೈತರ ಸಲಹೆ ಪಡೆದಿರುವ ಬಗ್ಗೆ ದಾಖಲೆಗಳಿಲ್ಲ''

Update: 2020-12-30 12:24 IST
ಫೈಲ್ ಫೋಟೊ

ಹೊಸದಿಲ್ಲಿ, ಡಿ.30: ನೂತನ ವಿವಾದಾತ್ಮಕ ಕೃಷಿ ಕಾನೂನುಗಳ ಜಾರಿಗೆ ಮುನ್ನ ಹಲವು ’ಹಕ್ಕುದಾರರ’ ಜತೆ ಚರ್ಚಿಸಲಾಗಿತ್ತು ಎಂದು ಕೇಂದ್ರ ಸರಕಾರ ಪದೇ ಪದೇ ಹೇಳುತ್ತಿದ್ದರೂ, "ಸರಕಾರ ಈ ವಿಷಯದಲ್ಲಿ ಯಾವುದೇ ದಾಖಲೆಗಳನ್ನು ಹೊಂದಿಲ್ಲ". ಎನ್‌ಡಿಟಿವಿ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಕೇಳಿದ್ದ ಪ್ರಶ್ನೆಗೆ ಇಲಾಖೆ ನೀಡಿದ ಉತ್ತರದಿಂದ ಈ ಅಂಶ ಬೆಳಕಿಗೆ ಬಂದಿದೆ.

ಈ ಮಸೂದೆಗಳನ್ನು ಆಂಗೀಕರಿಸುವ ಮುನ್ನ ನರೇಂದ್ರ ಮೋದಿ ಸರಕಾರ ಸಾಕಷ್ಟು ಸಲಹೆಗಳನ್ನು ಪಡೆದಿಲ್ಲ ಎಂದು ವಿರೋಧ ಪಕ್ಷಗಳು ಮತ್ತು ರೈತ ಸಂಘಟನೆಗಳು ಆಪಾದಿಸುತ್ತಲೇ ಬಂದಿವೆ. ಆದರೆ ಹಲವು ಸುತ್ತುಗಳ ಮಾತುಕತೆಯನ್ನು ರೈತರ ಜತೆ ನಡೆಸಲಾಗಿದೆ ಎನ್ನುವುದು ಸರಕಾರದ ವಾದ.

ಸೋಮವಾರ ಫೇಸ್‌ಬುಕ್ ಲೈವ್‌ನಲ್ಲಿ ಭಾಗವಹಿಸಿದ್ದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್, "ಈ ಕಾನೂನುಗಳು ದೇಶದಲ್ಲಿ ದೀರ್ಘಕಾಲದಿಂದ ಚರ್ಚೆಯಾಗುತ್ತಿದ್ದವು... ಸರಕಾರ ರಚಿಸಿದ್ದ ಹಲವು ಸಮಿತಿಗಳು ದೇಶಾದ್ಯಂತ ಹಲವು ಸಲಹಾ ಸಭೆಗಳನ್ನು ಆಯೋಜಿಸಿದ್ದವು" ಎಂದು ಹೇಳಿಕೆ ನೀಡಿದ್ದರು. ಆರಂಭದಲ್ಲಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರೂ ಹೊಸ ಕೃಷಿ ಕಾಯ್ದೆಗಳ ಬಗ್ಗೆ ವಿಸ್ತೃತ ಸಲಹೆ, ತರಬೇತಿ ಮತ್ತು ವಿಸ್ತರಣಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂದು ಹೇಳಿದ್ದರು.

ಇದೀಗ ಎನ್‌ಡಿಟಿವಿ ಪ್ರಶ್ನೆಗೆ ದೊರಕಿದ ಉತ್ತರದಿಂದ ಸರಕಾರದ ಹೇಳಿಕೆಗಳ ಬಗ್ಗೆ ಗಂಭೀರ ಸಂದೇಹಗಳು ಹುಟ್ಟಿಕೊಂಡಿವೆ. ಎನ್‌ಡಿಟಿವಿ ಈ ಸಂಬಂಧ ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಗೆ ಡಿ.15ರಂದು ಅರ್ಜಿ ಸಲ್ಲಿಸಿ, ಮೂರು ಕಾನೂನುಗಳ ಬಗ್ಗೆ ಸಲಹೆ ಪಡೆದ ವಿವರಗಳನ್ನು ನೀಡುವಂತೆ ಕೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News