ಶಾಲಾ ಸಹಪಾಠಿಯನ್ನು ಗುಂಡಿಟ್ಟು ಕೊಂದ 14ರ ಬಾಲಕ
ಲಕ್ನೋ,ಡಿ.31: ತರಗತಿಯಲ್ಲಿ ಕುಳಿತುಕೊಳ್ಳುವ ಬೆಂಚಿಗಾಗಿ ನಡೆದ ಕ್ಷುಲ್ಲಕ ಜಗಳ ಓರ್ವ ವಿದ್ಯಾರ್ಥಿಯ ಜೀವವನ್ನೇ ಬಲಿ ತೆಗೆದುಕೊಂಡ ಘಟನೆ ಉತ್ತರ ಪ್ರದೇಶದ ಬುಲಂದಶಹರ ಜಿಲ್ಲೆಯಲ್ಲಿ ನಡೆದಿದೆ. 10ನೇ ತರಗತಿಯ ವಿದ್ಯಾರ್ಥಿಯೋರ್ವನನ್ನು ಆತನ ಸಹಪಾಠಿಯೇ ಗುಂಡಿಟ್ಟು ಕೊಂದಿದ್ದಾನೆ.
14ರ ಹರೆಯದ 10ನೇ ತರಗತಿಯ ವಿದ್ಯಾರ್ಥಿಗಳಿಬ್ಬರು ಬುಧವಾರ ಕುಳಿತುಕೊಳ್ಳುವ ಬೆಂಚಿನ ವಿಷಯದಲ್ಲಿ ಹೊಡೆದಾಡಿದ್ದರು. ಇದರಿಂದ ತೀವ್ರ ಆಕ್ರೋಶಗೊಂಡಿದ್ದ ಓರ್ವ ವಿದ್ಯಾರ್ಥಿ ಗುರುವಾರ ತನ್ನ ಚಿಕ್ಕಪ್ಪನ ಪಿಸ್ತೂಲನ್ನು ಶಾಲೆಗೆ ತಂದಿದ್ದು, ಮೊದಲ ಎರಡು ತರಗತಿಗಳು ಮುಗಿದ ಬಳಿಕ ಸುಮಾರು 11 ಗಂಟೆಗೆ ತನ್ನೊಂದಿಗೆ ಜಗಳವಾಡಿದ್ದ ವಿದ್ಯಾರ್ಥಿಯ ಮೇಲೆ ಗುಂಡು ಹಾರಿಸಿದ್ದ. ತಲೆ,ಎದೆ ಮತ್ತು ಹೊಟ್ಟೆಗೆ ಗುಂಡೇಟುಗಳು ಬಿದ್ದಿದ್ದ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸೇನೆಯಲ್ಲಿರುವ ಆರೋಪಿ ಬಾಲಕನ ಚಿಕ್ಕಪ್ಪ ಹಾಲಿ ರಜೆಯಲ್ಲಿ ಮನೆಗೆ ಬಂದಿದ್ದು,ಅವರ ಪರವಾನಿಗೆಯುಳ್ಳ ಪಿಸ್ತೂಲನ್ನು ಆತ ಕದ್ದು ತಂದಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂತೋಷ ಕುಮಾರ ಸಿಂಗ್ ತಿಳಿಸಿದರು.
ಆರೋಪಿಯ ಬ್ಯಾಗಿನಲ್ಲಿ ಇನ್ನೊಂದು ನಾಡಪಿಸ್ತೂಲು ಪತ್ತೆಯಾಗಿದ್ದು, ಆತ ಹತ್ಯೆಗೆ ದೃಢಸಂಕಲ್ಪ ಮಾಡಿದ್ದ ಎನ್ನುವುದನ್ನು ಇದು ತೋರಿಸಿದೆ.
ಗುಂಡು ಹಾರಿಸಿದ ಬಳಿಕ ಆರೋಪಿ ಪರಾರಿಯಾಗಲು ಯತ್ನಿಸಿದ್ದ. ಮೊದಲ ಅಂತಸ್ತಿನಲ್ಲಿಯ ತರಗತಿಯಿಂದ ನೆಲ ಅಂತಸ್ತಿಗೆ ಓಡಿದ್ದ ಆತ ತನ್ನನ್ನು ಯಾರೂ ಹಿಡಿಯದಂತೆ ಭೀತಿ ಮೂಡಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದ. ಆದರೆ ಕೆಲವು ಶಿಕ್ಷಕರು ಆತನ ಮೇಲೆ ಮುಗಿಬಿದ್ದು ಪಿಸ್ತೂಲು ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆಗಲೂ ಆತ ಅವರೊಡನೆ ಕಾದಾಡಿದ್ದ ಎಂದು ಪೊಲೀಸರು ತಿಳಿಸಿದರು. ಆರೋಪಿಯನ್ನು ಪೊಲೀಸರು ಬಂಧಿಸಿದ್ದು,ಮುಂದಿನ ತನಿಖೆ ನಡೆಸುತ್ತಿದ್ದಾರೆ.