ಕೃಷಿ ಕಾನೂನು ವಿರೋಧಿಸಿ ಕೇರಳ ವಿಧಾನಸಭೆ ಅಂಗೀಕರಿಸಿದ ನಿರ್ಣಯ ಬೆಂಬಲಿಸಿ ಉಲ್ಟಾ ಹೊಡೆದ ಬಿಜೆಪಿ ಶಾಸಕ

Update: 2020-12-31 10:34 GMT
ಒ ರಾಜಗೋಪಾಲ್

ತಿರುವನಂತಪುರಂ: ಕೇಂದ್ರದ ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ಹಾಗೂ ಅವುಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಕೇರಳ ವಿಧಾನಸಭೆ ಅಂಗೀಕರಿಸಿದ ನಿರ್ಣಯವನ್ನು ಬೆಂಬಲಿಸಿದ್ದ ರಾಜ್ಯ ವಿಧಾನಸಭೆಯ ಏಕೈಕ ಬಿಜೆಪಿ ಸದಸ್ಯ ಒ ರಾಜಗೋಪಾಲ್, ಕೆಲವೇ ಗಂಟೆಗಳಲ್ಲಿ ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದಾರೆ.

"ಕೇರಳ ವಿಧಾನಸಭೆಯ ನಿರ್ಣಯವನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ವಿಧಾನಸಭೆಯಲ್ಲಿ ನನ್ನ ಭಾಷಣದಲ್ಲಿ ನನ್ನ ನಿಲುವನ್ನು ನಾನು ಸ್ಪಷ್ಟವಾಗಿ ತಿಳಿಸಿದ್ದೇನೆ. ನಾನು ಕೇಂದ್ರದ ಕಾನೂನನ್ನು ವಿರೋಧಿಸಿಲ್ಲ, ಈ ಕಾನೂನು ರೈತರ ಹಿತಕ್ಕಾಗಿ. ಪ್ರಧಾನಿ ಮಾತುಕತೆಗಳಿಗೆ ಸದಾ ಸಿದ್ಧರಿದ್ದಾರೆ ಆದರೆ ಕಾನೂನುಗಳನ್ನು ವಾಪಸ್ ಪಡೆಯಲೇಬೇಕೆಂಬ ಪ್ರತಿಭಟನಾಕಾರರ ನಿಲುವಿನಿಂದ  ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ,'' ಎಂದು ರಾಜಗೋಪಾಲ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಆದರೆ ಈ ಹೇಳಿಕೆ ನೀಡುವ ಕೆಲವೇ ಗಂಟೆಗಳಿಗೆ ಮುನ್ನ ಕೇರಳ ವಿಧಾನಸಭೆ ಕೃಷಿ ಕಾನೂನುಗಳನ್ನು ವಿರೋಧಿಸಿ ಅಂಗೀಕರಿಸಿದ ನಿರ್ಣಯವನ್ನು ರಾಜಗೋಪಾಲ್ ಬೆಂಬಲಿಸಿದ್ದರು. ಈ ನಿರ್ಣಯವನ್ನು ಸದನ ಸರ್ವಾನುಮತದಿಂದ ಅಂಗೀಕರಿಸಿತ್ತು. ಆಡಳಿತ ಎಲ್‍ಡಿಎಫ್, ವಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಜತೆಗೆ ಏಕೈಕ ಬಿಜೆಪಿ ಶಾಸಕರೂ ಬೆಂಬಲಿಸಿದ್ದರು. ನಂತರ ಸುದ್ದಿಗಾರರ ಜತೆ ಮಾತನಾಡಿದ್ದ ರಾಜಗೋಪಾಲ್ ``ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ನನ್ನ  ಅಭಿಪ್ರಾಯಗಳನ್ನು ಕೆಲ ವಿಷಯಗಳಲ್ಲಿ ತಿಳಿಸಿದ್ದೇನೆ.  ಸ್ವಲ್ಪ ಭಿನ್ನಾಭಿಪ್ರಾಯವಿತ್ತು, ಅದನ್ನು ಸದನದಲ್ಲಿ ಹೇಳಿದ್ದೇನೆ, ನಾನು  ನಿರ್ಣಯವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದೇನೆ, ಕೇಂದ್ರ ಸರಕಾರ ಮೂರು  ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು'' ಎಂದಿದ್ದರೆ ಇದೀಗ  ಯು-ಟರ್ನ್ ಹೊಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News