ಹಿಮಪಾತದಿಂದ ಅಟಲ್ ಸುರಂಗದ ಸಮೀಪ ಸಿಲುಕಿದ್ದ 300 ಪ್ರವಾಸಿಗರ ರಕ್ಷಣೆ

Update: 2021-01-03 07:36 GMT

ಶಿಮ್ಲಾ: ಹಿಮಪಾತದ ನಂತರ ರೋಹ್ಟಾಂಗ್‍ನ ಅಟಲ್ ಸುರಂಗದ ಬಳಿ ಸಿಲುಕಿಹಾಕಿಕೊಂಡಿದ್ದ 300 ಪ್ರವಾಸಿಗರನ್ನು ಹಿಮಾಚಲ ಪ್ರದೇಶ ಪೊಲೀಸರು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಪ್ರವಾಸಿಗರು ಶನಿವಾರ ಬೆಳಗ್ಗೆ ಸುರಂಗವನ್ನು ದಾಟಿದ್ದರು. ಹಿಮಪಾತದ ಕಾರಣದಿಂದಾಗಿ ಲಹೌಲ್‍ನಲ್ಲಿ ಯಾವುದೇ ವಿಶ್ರಾಂತಿ ತಾಣ ಕಂಡುಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಮನಾಲಿಗೆ ಹಿಂದಿರುವಾಗ ಮಧ್ಯದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಕುಲ್ಲು ಎಸ್ ಪಿ ಗೌರವ್ ಸಿಂಗ್ ಹೇಳಿದ್ದಾರೆ.
ಕುಲ್ಲು ಪೊಲೀಸರ ಸಹಯೋಗದೊಂದಿಗೆ ಲಾಹೌಲ್-ಸ್ಪಿಟಿ ಪೊಲೀಸರು ಸಂಜೆ ಸುರಂಗದ ಮೂಲಕ ವಾಹನವನ್ನುಕಳುಹಿಸಿದರು.

ಆದರೆ ಹಿಮ ಹಾಗೂ ಜಾರು ರಸ್ತೆಗಳಿಂದಾಗಿ ಮನಾಲಿಗೆ ಹೋಗುವಾಗ ಈ ವಾಹನಗಳು ಸಿಲುಕಿಕೊಂಡಿವೆ ಎಂದು ಸಿಂಗ್ ಹೇಳಿದರು.

48 ಆಸನಗಳ ಬಸ್, 24 ಆಸನಗಳ ಪೊಲೀಸ್ ಬಸ್ ಹಾಗೂ ಒಂದು ಪೊಲೀಸ್ ಕ್ವಿಕ್ ರಿಯಾಕ್ಷನ್ ತಂಡ ಸೇರಿದಂತೆ ಸುಮಾರು 70 ವಾಹನಗಳು ಪ್ರವಾಸಿಗರ ರಕ್ಷಣೆಗಾಗಿ ತೆರಳಿದ್ದವು. ರಕ್ಷಣಾ ಕಾರ್ಯಾಚರಣೆಯಲ್ಲಿ ಡಿಎಸ್ಪಿ ಹಾಗೂ ಮನಾಲಿಯ ಎಸ್‍ಎಚ್‍ಒ ಭಾಗಿಯಾಗಿದ್ದರು. ರಕ್ಷಣಾ ಕಾರ್ಯಾಚರಣೆಯು ಶನಿವಾರ ಸಂಜೆ ಆರಂಭವಾಗಿದ್ದು, ಮಧ್ಯರಾತ್ರಿಯ ನಂತರವೂ ಮುಂದುವರಿದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News