ಅಂತರ್ಜಾತಿ ಮದುವೆಯಾಗಿದ್ದಕ್ಕೆ 23ರ ಹರೆಯದ ಯುವಕನನ್ನು ಇರಿದು ಕೊಂದ ಯುವತಿಯ ಸಹೋದರ!‌

Update: 2021-01-03 06:33 GMT

ಚಂಡೀಗಢ,ಜ.03: ತನ್ನ ಸಹೋದರಿಯು ಅಂತರ್ಜಾತಿಯ ವಿವಾಹವಾಗಿದ್ದನ್ನು ವಿರೋಧಿಸಿ 23ರ ಹರೆಯದ ನೀರಜ್‌ ಎಂಬಾತನನ್ನು ಯುವತಿಯ ಸಹೋದರ ಇರಿದು ಕೊಂದ ಘಟನೆಯು ಹರ್ಯಾಣದ ಪಾಣಿಪತ್‌ ನಲ್ಲಿ ನಡೆದಿದೆ. ಕಳೆದ ಮೂರು ದಿನಗಳಲ್ಲಿ ಎರಡನೇ ʼಮರ್ಯಾದಾ ಹತ್ಯೆʼ ಪ್ರಕರಣ ಇದಾಗಿದೆ ಎಂದು ndtv.com  ವರದಿ ಮಾಡಿದೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿಯು ಯುವಕನಿಗೆ ಹನ್ನೆರಡಕ್ಕೂ ಹೆಚ್ಚು ಬಾರಿ ಮಾರಕಾಯುಧದಿಂದ ಇರಿದು ಪರಾರಿಯಾಗುವ ದೃಶ್ಯಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ. "ನಿನ್ನ ಜೊತೆ ಮಾತನಾಡಲಿಕ್ಕಿದೆ" ಎಂದು ಯುವಕನನ್ನು ಕರೆಸಿದ್ದ ಆರೋಪಿಯು ಬಳಿಕ ಕೊಲೆಗೈದಿದ್ದು, ಅಲ್ಲದೇ ತನ್ನ ಸಹೋದರಿಗೆ ಕರೆ ಮಾಡಿ ʼನೀನು ಸದ್ಯದಲ್ಲೇ ಅಳಲಿಕ್ಕಿದೆʼ ಎಂದು ಬೆದರಿಕೆ ಹಾಕಿದ್ದಾಗಿ ಮೃತ ಯುವಕನ ಸಹೋದರ ಜಗದೀಶ್‌ ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

"ಎರಡೂ ಕುಟುಂಬಸ್ಥರು ಪರಸ್ಪರ ಮಾತನಾಡಿ ಪಂಚಾಯತ್‌ ನಲ್ಲಿ ಈ ವಿಷಯವನ್ನು ಇತ್ಯರ್ಥ ಮಾಡಿದ್ದೆವು. ಆಕೆಯ ಕುಟುಂಬಸ್ಥರೆಲ್ಲರೂ ಒಪ್ಪಿಗೆ ನೀಡಿದ್ದರೂ ಯುವತಿಯ ಸಹೋದರ ಮಾತ್ರ ಪದೇ ಪದೇ ನಮಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ. ನಮಗೆ ರಕ್ಷಣೆ ಬೇಕೆಂದು ನಾವು ಪೊಲೀಸರನ್ನು ಕೇಳಿಕೊಂಡಾಗು ಅವರು ಸರಿಯಾದ ಸ್ಪಂದನೆ ನೀಡಿಲ್ಲ. ಆತನ ಈಗಲೂ ನಮಗೆ ಕರೆ ಮಾಡಿ, ಇನ್ನೂ ಹೆಚ್ಚಿನ ಸಾವಿಗಾಗಿ ತಯಾರಾಗಿ ಎಂದು ಬೆದರಿಕೆ ಹಾಕಿದ್ದಾನೆ. ನಮಗೇನು ಮಾಡುವುದೆಂದು ತಿಳಿಯುತ್ತಿಲ್ಲ" ಎಂದು ಶವಾಗಾರದ ಮುಂದೆ ನಿಂತಿದ್ದ ಜಗದೀಶ್‌ ಹೇಳಿದ್ದಾರೆ. 

ಯುವಕ ಮತ್ತು ಯುವತಿ ಇಬ್ಬರೂ ಜಾಟ್‌ ಸಮುದಾಯಕ್ಕೆ ಸೇರಿದವರಾದರೂ ಅವರ ಗ್ರಾಮ ಬೇರೆಯಾಗಿದ್ದೇ ಈ ದ್ವೇಷ ಕೊಲೆಗೆ ಕಾರಣ ಎನ್ನಲಾಗಿದೆ. ಸದ್ಯ ಆರೋಪಿಯು ತಲೆಮರೆಸಿಕೊಂಡಿದ್ದು, ಪೊಲೀಸರು ಅನ್ವೇಷಣೆಯಲ್ಲಿ ನಿರತರಾಗಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News