ಜಮ್ಮುಕಾಶ್ಮೀರ: ಎನ್‌ ಕೌಂಟರ್‌ ನಲ್ಲಿ ಬಲಿಯಾದ ಮಗನ ಮೃತದೇಹಕ್ಕಾಗಿ ಸ್ವತಃ ಗೋರಿ ತೋಡಿ ಕಾದು ಕುಳಿತಿರುವ ತಂದೆ!

Update: 2021-01-03 12:06 GMT
photo: ndtv.com

ಶ್ರೀನಗರ,ಜ.03: ನಾಲ್ಕು ದಿನಗಳ ಹಿಂದೆ ಪೊಲೀಸರ ಎನ್‌ ಕೌಂಟರ್‌ ಗೆ ಬಲಿಯಾದ ಪುತ್ರನನ್ನು ಪೊಲೀಸರು ಅಜ್ಞಾತ ಸ್ಥಳವೊಂದರಲ್ಲಿ ಹೂತು ಹಾಕಿದ್ದು, ಇದೀಗ ಮಗನ ಮೃತದೇಹಕ್ಕಾಗಿ ಸ್ವತಃ ಗುಂಡಿತೋಡಿ ತಂದೆಯು ಕಾದು ಕುಳಿತಿರುವ ಘಟನೆಯು ಜಮ್ಮು ಕಾಶ್ಮೀರದ ಶ್ರೀನಗರ ಸಮೀಪ ನಡೆದಿದೆ. ಈ ಕುರಿತು ndtv.com ವರದಿ ಮಾಡಿದೆ.

11ನೇ ತರಗತಿಯಲ್ಲಿ ಕಲಿಯುತ್ತಿದ್ದ ಅತರ್‌ ಮುಸ್ತಾಖ್‌ ಎಂಬಾತ ಹಾಗೂ ಆತನ ಇಬ್ಬರು ಸಹಚಚರು ಭಯೋತ್ಪಾದನ ಕೃತ್ಯ ನಡೆಸುತ್ತಿದ್ದಾರೆಂದು ಪೊಲೀಸರು ಎನ್‌ ಕೌಂಟರ್‌ ಮೂಲಕ ಕೊಂದಿದ್ದರು. "ನಾವು ಮಾಹಿತಿ ಪ್ರಕಾರ ಸ್ಥಳಕ್ಕೆ ಹೋದ ವೇಳೆ ಶರಣಾಗತಿಯ ಆಯ್ಕೆಯನ್ನು ನೀಡಿದ್ದೆವು. ಆದರೆ, ಅವರು ಒಳಗಿನಿಂದ ಗ್ರೆನೇಡ್‌ ಎಸೆಯಲು ಮತ್ತು ಬಂದೂಕು ಬಳಸಲು ಪ್ರಾರಂಭಿಸಿದರು. ಕೊನೆಗೆ ನಾವು ಎನ್‌ ಕೌಂಟರ್‌ ಮೂಲಕ ಅವರನ್ನು ಕೊಲ್ಲಬೇಕಾಯಿತು" ಎಂದು ಮೇಜರ್‌ ಜನರಲ್‌ ಎಚ್.ಎಸ್‌ ಸಾಹಿ ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

ಆದರೆ ಅತರ್‌ ಮುಸ್ತಾಖ್‌ ಕುಟುಂಬವು "ಆತ ಯಾವುದೇ ತಪ್ಪನ್ನು ಮಾಡಲು ಸಾಧ್ಯವಿಲ್ಲ. ಅವನೋರ್ವ ಅಮಾಯಕ. ನಾವು ಆತನ ಮೃತದೇಹಕ್ಕಾಗಿ ಕಾಯುತ್ತಿದ್ದೇವೆ. ನಮ್ಮ ಕುಟುಂಬದ ಸ್ಮಶಾನದಲ್ಲೇ ಆತನ ದಫನ ಮಾಡಬೇಕು" ಎಂದಿದ್ದಾಗಿ ವರದಿ ತಿಳಿಸಿದೆ. 11ನೇ ತರಗತಿಯ ವಿದ್ಯಾರ್ಥಿ ಮುಸ್ತಾಖ್‌ ಆತನ ಸ್ನೇಹಿತರಾದ ಝುಬೈರ್‌ ಅಹ್ಮದ್‌ ಹಾಗೂ ಅಜಾಝ್‌ ಅಹ್ಮದ್‌ ಎಂಬವರನ್ನು ಪೊಲೀಸರು ಎನ್‌ ಕೌಂಟರ್‌ ಮಾಡಿದ್ದರು. ಅವರಿಂದ ಎರಡು ಬಂದೂಕು ಮತ್ತು ಒಂದು ರೈಫಲ್‌ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದರು.

"ಇದು ನಕಲಿ ಎನ್‌ ಕೌಂಟರ್‌ ಆಗಿದೆ. ಎನ್‌ ಕೌಂಟರ್‌ ಗೆ ಬಲಿಯಾದ ಇಬ್ಬರು ಕೂಡಾ ಪೊಲೀಸ್‌ ಕುಟುಂಬಕ್ಕೆ ಸೇರಿದವರು. ಅಜಾಝ್‌ ಅಹ್ಮದ್‌ ಪೊಲೀಸ್‌ ಹೆಡ್‌ ಕಾನ್‌ ಸ್ಟೇಬಲ್‌ ರ ಪುತ್ರ ಮತ್ತು ಝುಬೈರ್‌ ಅಹ್ಮದ್‌ ನ ಇಬ್ಬರು ಸಹೋದರರು ಕೂಡಾ ಪೊಲೀಸ್‌ ಇಲಾಖೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಅವರು ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಲು ಸಾಧ್ಯವಿಲ್ಲ ಎಂದು ಯುವಕರ ಕುಟುಂಬಸ್ಥರು ಹೇಳಿಕೆ ನೀಡಿದ್ದಾಗಿ ndtv.com ವರದಿ ಮಾಡಿದೆ.

ಇದುವರೆಗೂ ಈ ಮೂವರ ಎನ್‌ ಕೌಂಟರ್‌ ಕುರಿತು ಪೊಲೀಸರು ಯಾವುದೇ ಸ್ಥಿರವಾದ ಹೇಳಿಕೆಗಳನ್ನು ನೀಡಿಲ್ಲ. ಅವರು ಭಯೋತ್ಪಾದಕರ ಲಿಸ್ಟ್‌ ನಲ್ಲೋ, ಅಥವಾ ಅಂತಹಾ ಚಟುವಟಿಕೆಗಳಲ್ಲಿ ಈ ಹಿಂದೆ ಭಾಗಿಯಾದ ಕುರಿತು ಯಾವುದೇ ದಾಖಲೆಗಳಿಲ್ಲ ಎಂದು ಪೊಲೀಸರೇ ಹೇಳಿದ್ದು, ಎರಡು ದಿನಗಳ ನಂತರ ಅವರು ಭಯೋತ್ಪಾದಕರ ಸಹಾಯಕರಾಗಿದ್ದರು ಎಂದು ಪೊಲೀಸರು ಹೇಳಿಕ ನೀಡಿದ್ದಾಗಿ ವರದಿ ತಿಳಿಸಿದೆ. "ನಾವು ಎಲ್ಲಾ ದಿಕ್ಕಿನಲ್ಲೂ ಈ ಕುರಿತು ತನಿಖೆ ನಡೆಸುತ್ತಿದ್ದೇವೆ" ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನಿ ಭಯೋತ್ಪಾದಕರೆಂದು ಮೂವರು ಕಾರ್ಮಿಕರನ್ನು ಕೊಂದ ಘಟನೆಯು ಶೋಪಿಯಾನ್‌ ನಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿ ಸೇನಾ ಮುಖ್ಯಸ್ಥ ಹಾಗೂ ಇನ್ನಿತರ ಅಧಿಕಾರಿಗಳ ಮೇಲೆ ಚಾರ್ಜ್‌ ಶೀಟ್‌ ಹಾಕಿದ ಕೆಲವೇ ದಿನಗಳ ಅಂತರದಲ್ಲಿ ಈ ಎನ್‌ ಕೌಂಟರ್‌ ಕೂಡಾ ನಡೆದಿದೆ. ಕಾರ್ಮಿಕರನ್ನು ಎನ್‌ ಕೌಂಟರ್‌ ಮಾಡಿ ಕೊಂದ ಘಟನೆಯಲ್ಲಿ, ಅವರು ಶೋಪಿಯಾನ್‌ ಬಳಿ ಸ್ಫೋಟಕ್ಕೆ ಸಂಚು ಹೂಡಿದ್ದರು ಎಂದು ಪೊಲೀಸರು ತಿಳಿಸಿದ್ದರು. ಆದರೆ ನ್ಯಾಯಾಲವು ತನಿಖೆ ನಡೆಸಿದ ಬಳಿಕ, ಅವರನ್ನು ಎನ್‌ ಕೌಂಟರ್‌ ಮಾಡಿದ ಬಳಿಕ ಅವರ ದೇಹದ ಬಳಿ ಆಯುಧಗಳನ್ನು ಇರಿಸಲಾಗಿತ್ತು ಎಂಬ ವಿಚಾರವು ಬೆಳಕಿಗೆ ಬಂದಿತ್ತು ಎಂದು ndtv.com ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News