ಕೈಪಂಪ್‌ನಿಂದ ನೀರೆತ್ತಿದ ದಲಿತರ ಮೇಲೆ ಹಲ್ಲೆ, ಜೀವಬೆದರಿಕೆ: ಆರೋಪ

Update: 2021-01-04 17:03 GMT

ಲಕ್ನೊ, ಜ.4: ಸರಕಾರ ನಿರ್ಮಿಸಿದ ಕೈಪಂಪ್ ಬಳಸಿದ ಕಾರಣಕ್ಕೆ ಪ್ರಭಾವೀ ವ್ಯಕ್ತಿಗಳು ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದರಿಂದ ತಾವು ಊರನ್ನೇ ತೊರೆಯುವಂತಾಗಿದೆ ಎಂದು ದಲಿತ ಕುಟುಂಬದವರು ನೀಡಿದ ದೂರಿನ ಹಿನ್ನೆಲೆಯಲ್ಲಿ 3 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರಪ್ರದೇಶ ಪೊಲೀಸರು ಹೇಳಿದ್ದಾರೆ.

ಉತ್ತರಪ್ರದೇಶದ ತೆಂಡುರ ಗ್ರಾಮದ ಬಿಸಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 25ರಂದು ಈ ಘಟನೆ ನಡೆದಿದೆ. 80 ವರ್ಷದ ತಂದೆಯೊಂದಿಗೆ ತಾನು ಸರಕಾರದ ಕೈಪಂಪ್‌ನಿಂದ ನೀರು ತರಲು ತೆರಳಿದ್ದಾಗ ಸ್ಥಳೀಯ ಪ್ರಭಾವೀ ವ್ಯಕ್ತಿಗಳು ತಮ್ಮನ್ನು ದೊಣ್ಣೆಯಿಂದ ಥಳಿಸಿದ್ದಾರೆ. ಅಲ್ಲದೆ, ಮನೆಗೆ ಬೆಂಕಿಇಟ್ಟು ಇಬ್ಬರನ್ನೂ ಸಜೀವ ದಹಿಸುವುದಾಗಿ ಬೆದರಿಸಿದ್ದಾರೆ. ಇದರಿಂದ ಭೀತಿಗೊಂಡ ತಾವು ಮನೆಬಿಟ್ಟು ಓಡಿಹೋಗಿದ್ದೇವೆ ಎಂದು ದಲಿತ ಕುಟುಂಬದ ವ್ಯಕ್ತಿಯೊಬ್ಬ ಪೊಲೀಸ್ ಅಧೀಕ್ಷಕರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾನೆ. ತಾವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ಅವರು ಪ್ರಕರಣ ದಾಖಲಿಸಿದ್ದರೂ, ಹಲ್ಲೆಯಿಂದ ತಂದೆಯ ಮೇಲಾದ ಗಾಯದ ಬಗ್ಗೆ ಪ್ರಕರಣದಲ್ಲಿ ಉಲ್ಲೇಖಿಸಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇದೊಂದು ಹಲ್ಲೆ ಪ್ರಕರಣವಾಗಿದ್ದು ಬಬೇರು ಸರ್ಕಲ್ ಇನ್‌ಸ್ಪೆಕ್ಟರ್ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಬಿಸಂಡ ಪೊಲೀಸ್ ಠಾಣೆಯ ಅಧಿಕಾರಿ ನರೇಂದ್ರ ಪ್ರತಾಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News