ಇದು ಪ್ರಜಾಪ್ರಭುತ್ವ ವ್ಯವಸ್ಥೆಗೊಂದು ಮಾದರಿ

Update: 2021-01-04 17:49 GMT

ಮಾನ್ಯರೇ,

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇದೇ ಪಂಚಾಯತ್‌ನಲ್ಲಿ ಕಳೆದ ಹತ್ತು ವರ್ಷಗಳಿಂದ ಕಸ ಗುಡಿಸುತ್ತಾ, ಕುರ್ಚಿ, ಮೇಜುಗಳನ್ನು ಸ್ವಚ್ಛ ಮಾಡುತ್ತಾ ಅರೆಕಾಲಿಕ ಕೆಲಸ ಮಾಡುತ್ತಿದ್ದ ದಲಿತ ಮಹಿಳೆ ಎ. ಆನಂದವಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೊಂದು ಮಾದರಿ.

ಕೇರಳದಲ್ಲಿ ನಡೆದ ಇಂತಹ ಬೆಳವಣಿಗೆಯಿಂದ ಸರ್ವಾಧಿಕಾರಿ ಧೋರಣೆ ಮತ್ತು ಏಕವ್ಯಕ್ತಿಯ ನಾಮ ಜಪದಿಂದ ಚುನಾವಣೆ ಎದುರಿಸುತ್ತಿರುವ ರಾಷ್ಟ್ರೀಯ ಪಕ್ಷಗಳಿಗೆ ಇದೊಂದು ನೈತಿಕ ಪಾಠವಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿರುವ ಸಂಕೇತ ಹಾಗೂ ದೇಶದ ಕಾನೂನಿನ ಮುಂದೆ ಎಲ್ಲರೂ ಸಮಾನರು, ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕು ಇದೆ ಎಂದು ನಿರೂಪಿಸಿದೆ. ಚಪ್ಪಲಿ ಹೊಲೆಯುತ್ತಿದ್ದವನ ಮಗ ಅಬ್ರಾಹಂ ಲಿಂಕನ್ ಅಮೆರಿಕದ ಅಧ್ಯಕ್ಷ ಸ್ಥಾನ ಅಲಂಕರಿಸಿದ ರೀತಿಗೂ ಇಲ್ಲಿಗೂ ಅಜಗಜಾಂತರ ಇದ್ದರೂ ಸದ್ಯದ ವಾಸ್ತವ ಪರಿಸ್ಥಿತಿ ಹೋಲಿಕೆ ಆಗುತ್ತಿದೆ. ಅತ್ಯುತ್ತಮ ಸಂವಿಧಾನ ಇದ್ದರೆ ಯಾರು ಏನಾದರೂ ಆಗಬಹುದು. ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ಅಚ್ಚರಿಗಳನ್ನು ಕಾಣಬಹುದು.

ಪಕ್ಷ ಅಥವಾ ಸಿದ್ಧಾಂತಗಳು ಯಾವುದೇ ಇರಲಿ ಕಸ ಗುಡಿಸುತ್ತಿದ್ದವರು ಅಧ್ಯಕ್ಷ ಸ್ಥಾನ ಅಲಂಕರಿಸುವುದು ದೊಡ್ಡಮಟ್ಟದ ಪರಿವರ್ತನೆ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂದು ಅಂಬೇಡ್ಕರ್ ಅವರು ಕಂಡ ಆಶಯವನ್ನು ಕೇರಳದ ಬುದ್ಧಿವಂತ ಜನತೆ ಎತ್ತಿಹಿಡಿದಿದ್ದಾರೆ.

Writer - -ಅನಿಲ್ ಕುಮಾರ್, ನಂಜನಗೂಡು

contributor

Editor - -ಅನಿಲ್ ಕುಮಾರ್, ನಂಜನಗೂಡು

contributor

Similar News