ಲವ್ ಜಿಹಾದ್ ಕಾನೂನು: ಉತ್ತರ ಪ್ರದೇಶ, ಉತ್ತರಾಖಂಡ ಸರಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂಕೋ‍ರ್ಟ್

Update: 2021-01-06 08:19 GMT

ಹೊಸದಿಲ್ಲಿ,ಜ.06: ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯ ಸರಕಾರಗಳು ಬಲವಂತದ ಮತಾಂತರಗಳನ್ನು ತಡೆಯುವ ಉದ್ದೇಶದಿಂದ ಜಾರಿಗೊಳಿಸಿರುವ ಕಾನೂನುಗಳ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಲಿದ್ದು ಇಂದು ಎರಡೂ ರಾಜ್ಯ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ. ಮುಂದಿನ ವಿಚಾರಣೆ ನಾಲ್ಕು ವಾರಗಳ ನಂತರ ನಡೆಯಲಿದ್ದು ಅಷ್ಟರೊಳಗಾಗಿ ಈ ಎರಡೂ ರಾಜ್ಯ ಸರಕಾರಗಳು ತಮ್ಮ ಪ್ರತಿಕ್ರಿಯೆ ನೀಡಬೇಕಿದೆ‌ ಎಂದು ತಿಳಿದು ಬಂದಿದೆ.

ಈ ಕಾನೂನುಗಳು ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ತರುತ್ತಿವೆ ಹಾಗೂ ಅವುಗಳು ಜಾತ್ಯತೀತತೆಯ ತತ್ವಕ್ಕೆ ವಿರುದ್ಧವಾಗಿರುವುದರಿಂದ ಅವುಗಳನ್ನು ರದ್ದುಗೊಳಿಸಬೇಕೆಂದು  ಆಗ್ರಹಿಸಿ ಸಲ್ಲಿಸಲಾಗಿರುವ ಹಲವಾರು ಅಪೀಲುಗಳು ವಿಚಾರಣೆಗೆ ಬಂದಾಗ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಲು ತೀರ್ಮಾನಿಸಿದೆ.

ಆರಂಭದಲ್ಲಿ ಈ ಅಪೀಲುಗಳನ್ನು ಕೈಗೆತ್ತಿಕೊಳ್ಳಲು ಹಿಂಜರಿದಿದ್ದ ಸುಪ್ರೀಂ ಕೋಟ್ ಅಪೀಲುದಾರರಿಗೆ ಹೈಕೋರ್ಟ್ ಕದ ತಟ್ಟಲು ಸೂಚಿಸಿತ್ತು. ಆದರೆ ಅಪೀಲುದಾರರಲ್ಲೊಬ್ಬರಾಗಿರುವ ಸಿಟಿಜನ್ಸ್ ಫಾರ್ ಜಸ್ಟಿಸ್ ಎಂಡ್ ಪೀಸ್ ಸಂಸ್ಥೆಯ ಪರ ವಕೀಲ ಸಿ ಯು ಸಿಂಗ್ ಪ್ರತಿಕ್ರಿಯಿಸಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಹೊರತುಪಡಿಸಿ ಮಧ್ಯ ಪ್ರದೇಶ ಹಾಗೂ ಹಿಮಾಚಲ ಪ್ರದೇಶ ಕೂಡ ಇಂತಹ ಕಾನೂನು ಜಾರಿಗೊಳಿಸಿರುವುದರಿಂದ  ಸುಪ್ರೀಂಕೋರ್ಟ್ ಈ ಕುರಿತು ಪರಿಶೀಲಿಸಬೇಕೆಂದು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News