ಟಿಆರ್ ಪಿ ಹಗರಣದಲ್ಲಿ ರಿಪಬ್ಲಿಕ್ ಟಿವಿ, ಅರ್ನಬ್ ವಿರುದ್ಧ ಸಾಕ್ಷ್ಯಗಳು ಲಭ್ಯ: ಮುಂಬೈ ಪೊಲೀಸ್

Update: 2021-01-06 13:54 GMT

ಮುಂಬೈ: ಟಿಆರ್ ಪಿ ತಿರುಚಿದ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಹಾಗೂ ಅದರ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ “ಕೆಲವು ಪುರಾವೆ” ಲಭಿಸಿವೆ ಎಂದು ಬುಧವಾರ ಮುಂಬೈ ಪೊಲೀಸರು ಬಾಂಬೆ ಹೈಕೋರ್ಟಿಗೆ ತಿಳಿಸಿದ್ದಾರೆ.

ಆದರೆ  ನ್ಯಾಯಾಲಯವು ಯಾವುದೇ ವಾದ ಆಲಿಸದೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ. ಮುಂದಿನ ವಿಚಾರಣೆ ನಡೆಯಲಿರುವ ಜನವರಿ 15ರ ತನಕ ಯಾವುದೇ ಬಲವಂತದ ಕ್ರಮ ತೆಗೆದುಕೊಳ‍್ಳುವುದಿಲ್ಲ ಎಂದು ಹಿಂದಿನ ಹೇಳಿಕೆಯನ್ನು ಮುಂದುವರಿಸಲು ಪೊಲೀಸರು ಒಪ್ಪಿಕೊಂಡಿದ್ದಾರೆ.

ಕಳೆದ ವರ್ಷ ಕೆಲವು ಟಿವಿ ಚಾನೆಲ್ ಗಳು ತಮ್ಮ ಜಾಹೀರಾತು ಆದಾಯ ಹೆಚ್ಚಿಸಿಕೊಳ್ಳಲು ಟಿಆರ್ ಪಿ ಸಂಖ್ಯೆಯನ್ನು ಅಡ್ಡದಾರಿಯಲ್ಲಿ ವೇಗವಾಗಿ ಹೆಚ್ಚಿಸಿಕೊಳ್ಳುತ್ತಿವೆ ಎಂದು ಆರೋಪಿಸಿ ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ದೂರು ಸಲ್ಲಿಸಿತ್ತು. ಆ ಬಳಿಕ ತನಿಖೆ ನಡೆದು ನಕಲಿ ಟಿಆರ್ ಪಿ ಹಗರಣವನ್ನು ಪತ್ತೆ ಮಾಡಲಾಗಿತ್ತು.

ಹಿರಿಯ ವಕೀಲ ಹರೀಶ್ ಸಾಳ್ವೆ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇನ್ನೋರ್ವ ಹಿರಿಯ ವಕೀಲರು ಕೂಡ ಕುಟುಂಬದ ಗಂಭೀರ ಆರೋಗ್ಯ ಸಮಸ್ಯೆಯಲ್ಲಿ ಸಿಲುಕಿದ್ದು ನ್ಯಾಯಾಲಯಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ರಿಪಬ್ಲಿಕ್ ಟಿವಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಯಿತು.

ರಿಪಬ್ಲಿಕ್ ಟಿವಿ ಹಾಗೂ ಅರ್ನಬ್ ಗೋಸ್ವಾಮಿ ವಿರುದ್ದ ಬಾರ್ಕ್ ದಾಖಲಿಸಿದ ಪ್ರಕರಣದ ತನಿಖೆಯಲ್ಲಿ ನಾವು (ಮುಂಬೈ ಪೊಲೀಸರು)ಸಾಕ್ಷ್ಯಗಳನ್ನು ಕಂಡುಕೊಂಡಿದ್ದೇವೆ. ಈ ತುರ್ತು ಪರಿಸ್ಥಿತಿಯ ಕಾರಣ ಆರೋಪಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬ ನಮ್ಮ ಹಿಂದಿನ ಹೇಳಿಕೆಯನ್ನು ಮುಂದುವರೆಸುತ್ತೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾಗಿ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News