ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ: ಎಐಎಡಿಎಂಕೆ ಮಾಜಿ ಮುಖಂಡ ಸಹಿತ ಮತ್ತೆ ಮೂವರ ಬಂಧನ

Update: 2021-01-06 17:05 GMT

ಚೆನ್ನೈ, ಜ.6: 2019ರಲ್ಲಿ ನಡೆದಿದ್ದ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಎಐಎಡಿಎಂಕೆಯ ಮಾಜಿ ಮುಖಂಡನ ಸಹಿತ ಮತ್ತೆ ಮೂವರು ಆರೋಪಿಗಳನ್ನು ಬುಧವಾರ ಬಂಧಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಎಐಎಡಿಎಂಕೆ ಯುವ ವಿಭಾಗದ ಸದಸ್ಯನಾಗಿದ್ದ ಕೆ. ಅರುಣಾನಂದಮ್ ಸೇರಿದಂತೆ ಬಂಧಿತ ಮೂವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ 8ಕ್ಕೇರಿದೆ. 2019ರಲ್ಲಿ ಐದು ಆರೋಪಿಗಳನ್ನು ಬಂಧಿಸಲಾಗಿತ್ತು.

ಕೊಯಂಬತ್ತೂರಿನ ಪೊಲ್ಲಾಚಿ ಬಳಿ ಕಾರಿನೊಳಗೆ ತನ್ನ ಮೇಲೆ ಐದು ಮಂದಿ ಅತ್ಯಾಚಾರ ಎಸಗಿದ್ದಲ್ಲದೆ, ಕೃತ್ಯವನ್ನು ಚಿತ್ರೀಕರಿಸಿಕೊಂಡು ಬ್ಲಾಕ್‌ಮೇಲ್ ಮಾಡುತಿದ್ದಾರೆ ಎಂದು 2019ರ ಫೆಬ್ರವರಿಯಲ್ಲಿ 19 ವರ್ಷದ ಮಹಿಳೆಯೊಬ್ಬರು ದೂರು ನೀಡಿದ್ದರು. ಅರುಣಾನಂದಮ್ ಸಹಿತ ಆರೋಪಿಗಳ ಗುಂಪೊಂದು ಇದೇ ರೀತಿ 50ಕ್ಕೂ ಅಧಿಕ ಮಹಿಳೆಯರನ್ನು ಬ್ಲಾಕ್‌ಮೇಲ್ ಮಾಡಿದೆ. ಇದರಲ್ಲಿ ಹಲವರ ಮೇಲೆ ಅತ್ಯಾಚಾರವನ್ನೂ ಎಸಗಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿತ್ತು.

ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರನ್ನು ಪರಿಚಯಿಸಿಕೊಂಡು ಅವರ ಸ್ನೇಹ ಸಂಪಾದಿಸಿ ಬಳಿಕ ಪೊಲ್ಲಾಚಿಗೆ ಕರೆಸಿಕೊಂಡು ದೌರ್ಜನ್ಯ ಎಸಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News