ಅಸ್ಸಾಂ: ಸಿಎಎ ವಿರೋಧಿ ಹೋರಾಟಗಾರ ಅಖಿಲ್ ಗೊಗೊಯಿ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

Update: 2021-01-07 15:13 GMT

ಗುವಾಹಟಿ, ಜ.7: ಕಳೆದ ವರ್ಷ ಪ್ರತಿಭಟನೆಗಳ ಸಂದರ್ಭ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೇಶದ್ರೋಹದ ಆರೋಪದಲ್ಲಿ ಬಂಧಿತರಾಗಿರುವ ಸಿಎಎ ವಿರೋಧಿ ಹೋರಾಟಗಾರ ಅಖಿಲ್ ಗೊಗೊಯಿ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಗುವಾಹಟಿ ಉಚ್ಚ ನ್ಯಾಯಾಲಯವು ಗುರುವಾರ ತಿರಸ್ಕರಿಸಿದೆ. ಕಳೆದ ವರ್ಷದ ಆಗಸ್ಟ್ ನಲ್ಲಿ ತನ್ನ ಜಾಮೀನು ಅರ್ಜಿಯನ್ನು ಎನ್‌ಐಎ ನ್ಯಾಯಾಲಯವು ತಿರಸ್ಕರಿಸಿದ ಬಳಿಕ ಗೊಗೊಯಿ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು.

ಅಸ್ಸಾಮಿನಲ್ಲಿ ಸಿಎಎ ವಿರುದ್ಧ ಆಂದೋಲನದ ಸಂದರ್ಭದಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಹದಗೆಡುತ್ತಿದ್ದ ಹಿನ್ನೆಲೆಯಲ್ಲಿ 2019, ಡಿಸೆಂಬರ್‌ನಲ್ಲಿ ಜೋರ್ಹಾಟ್‌ನಿಂದ ಗೊಗೊಯಿ ಅವರನ್ನು ಮತ್ತು ಮರುದಿನ ಅವರ ಮೂವರು ಸಹಚರರನ್ನು ಬಂಧಿಸಲಾಗಿತ್ತು. ಹಿಂಸಾತ್ಮಕ ಪ್ರತಿಭಟನೆಯಲ್ಲಿ ಅವರ ಪಾತ್ರ ಮತ್ತು ಮಾವೋವಾದಿಗಳೊಂದಿಗೆ ಅವರ ಸಂಭಾವ್ಯ ಸಂಬಂಧಗಳ ಬಗ್ಗೆ ತನಿಖೆಗಾಗಿ ಅವರನ್ನು ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಹಸ್ತಾಂತರಿಸಲಾಗಿತ್ತು.

2020 ಮಾರ್ಚ್‌ನಲ್ಲಿ ಎನ್‌ಐಎ ನ್ಯಾಯಾಲಯವು ಗೊಗೊಯಿ ಅವರಿಗೆ ಜಾಮೀನು ಮಂಜೂರು ಮಾಡಿತ್ತಾದರೂ ಗುವಾಹಟಿ ಉಚ್ಚ ನ್ಯಾಯಾಲಯವು ಅದಕ್ಕೆ ತಡೆಯಾಜ್ಞೆಯನ್ನು ನೀಡಿತ್ತು. ಅವರ ಮೂವರು ಸಹಚರರು ಅದಾಗಲೇ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು. ಹಲವಾರು ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಲ್ಲ ನಾಲ್ವರನ್ನೂ ನಂತರ ಬಂಧಿಸಲಾಗಿತ್ತಾದರೂ,ಮತ್ತೊಮ್ಮೆ ಜಾಮೀನು ಲಭಿಸಿತ್ತು.

ಆದರೆ ಕೃಷಿಕ ಮುಕ್ತಿ ಸಂಗ್ರಾಮ ಸಮಿತಿಯ ಅಧ್ಯಕ್ಷರೂ ಆಗಿರುವ ಗೊಗೊಯಿ ವಿರುದ್ಧ ಎರಡು ಪ್ರಕರಣಗಳಲ್ಲಿ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯಡಿ ದೇಶದ್ರೋಹ ಆರೋಪವನ್ನು ಹೊರಿಸಲಾಗಿದೆ.

ತನ್ಮಧ್ಯೆ ಕಳೆದ ವರ್ಷದ ಜುಲೈನಲ್ಲಿ ಕೋವಿಡ್-19 ಸೋಂಕುಪೀಡಿತರಾಗಿದ್ದ ಗೊಗೊಯಿ ಅವರಿಗೆ ಗುವಾಹಟಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಜು.17ರಂದು ಉಚ್ಚ ನ್ಯಾಯಾಲಯವು ಗೊಗೊಯಿ ಅವರಿಗೆ ಇತರ ಮೂರು ಪ್ರಕರಣಗಳಲ್ಲಿ ಜಾಮೀನು ಮಂಜೂರು ಮಾಡಿತ್ತು.

ಗೊಗೊಯಿ ಬೆಂಬಲಿಗರು ಮುಂದಿನ ಎಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸವಾಲು ಒಡ್ಡಲು ‘ರೈಜೋರ ದಳ’ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News