ಜ.31ರವರೆಗೆ ಬ್ರಿಟನ್‌ನಿಂದ ಭಾರತಕ್ಕೆ ಬರುವ ವಿಮಾನಗಳ ನಿರ್ಬಂಧಕ್ಕೆ ಕೇಜ್ರಿವಾಲ್ ಆಗ್ರಹ

Update: 2021-01-07 15:16 GMT

ಹೊಸದಿಲ್ಲಿ, ಜ.7: ಬ್ರಿಟನ್‌ನಲ್ಲಿ ಮೊದಲು ಪತ್ತೆಯಾದ ರೂಪಾಂತರಿತ ಕೊರೋನವೈರಸ್ ವಿರುದ್ಧ ದೇಶವು ಈಗ ಹೋರಾಡುತ್ತಿರುವುದರಿಂದ ಆ ರಾಷ್ಟ್ರದಿಂದ ಭಾರತಕ್ಕೆ ಬರುವ ಮತ್ತು ಇಲ್ಲಿಂದ ಅಲ್ಲಿಗೆ ತೆರಳುವ ವಿಮಾನಯಾನಗಳ ಮೇಲಿನ ನಿಷೇಧವನ್ನು ವಿಸ್ತರಿಸುವಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ಕೇಂದ್ರವನ್ನು ಆಗ್ರಹಿಸಿದ್ದಾರೆ.

‘ಬ್ರಿಟನ್ ವಿಮಾನಯಾನಗಳ ಮೇಲಿನ ನಿಷೇಧವನ್ನು ಹಿಂದೆಗೆದುಕೊಳ್ಳಲು ಕೇಂದ್ರವು ನಿರ್ಧರಿಸಿದೆ. ಬ್ರಿಟನ್‌ನಲ್ಲಿ ಉದ್ಭವಿಸಿರುವ ಅತ್ಯಂತ ಗಂಭೀರ ಕೋವಿಡ್ ಸ್ಥಿತಿಯ ಹಿನ್ನೆಲೆಯಲ್ಲಿ ವಿಮಾನಯಾನ ನಿಷೇಧವನ್ನು ಜ.31ರವರೆಗೆ ನಿಷೇಧಿಸುವಂತೆ ನಾನು ಕೇಂದ್ರವನ್ನು ಒತ್ತಾಯಿಸುತ್ತೇನೆ’ ಎಂದು ಟ್ವೀಟಿಸಿರುವ ಕೇಜ್ರಿವಾಲ್,ಅತ್ಯಂತ ತ್ವರಿತವಾಗಿ ಹರಡುತ್ತಿರುವ ರೂಪಾಂತರಿತ ಕೊರೋನ ವೈರಸ್‌ನ ವಿರುದ್ಧ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದ್ದಾರೆ. ಭಾರತದಲ್ಲಿ ಈಗಾಗಲೇ ರೂಪಾಂತರಿತ ಕೋವಿಡ್‌ನ 73 ಪ್ರಕರಣಗಳು ವರದಿಯಾಗಿವೆ.

ಸರಕಾರವು ಬ್ರಿಟನ್‌ನಿಂದ ವಿಮಾನಯಾನಗಳನ್ನು ಅಮಾನತುಗೊಳಿಸಿ ಡಿ.23ರಂದು ಆದೇಶಿಸಿತ್ತು. ಈ ನಿಷೇಧವನ್ನು ಬಳಿಕ ಜ.8ರವರೆಗೆ ವಿಸ್ತರಿಸಲಾಗಿತ್ತು.

ಬ್ರಿಟನ್‌ನಿಂದ ಸೀಮಿತ ಸಂಖ್ಯೆಯಲ್ಲಿ ವಿಮಾನಯಾನಗಳ ಪುನರಾರಂಭಕ್ಕೆ ಸರಕಾರವು ಅನುಮತಿ ನೀಡಿದೆ ಎಂದು ನಾಗರಿಕ ವಾಯುಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮಂಗಳವಾರ ತಿಳಿಸಿದ್ದರು.

ಭಾರತದಲ್ಲಿ ಕೋವಿಡ್ ಸ್ಥಿತಿಯನ್ನು ತುಂಬಾ ಪರಿಶ್ರಮದಿಂದ ನಿಯಂತ್ರಣಕ್ಕೆ ತರಲಾಗಿದೆ ಎಂದು ಬೆಟ್ಟು ಮಾಡಿರುವ ಕೇಜ್ರಿವಾಲ್, ಈಗ ಬ್ರಿಟನ್ ವಿಮಾನಯಾನಗಳ ಮೇಲಿನ ನಿಷೇಧವನ್ನು ರದ್ದುಗೊಳಿಸಿ ನಮ್ಮ ಜನರನ್ನೇಕೆ ಅಪಾಯಕ್ಕೆ ಒಡ್ಡುತ್ತಿದ್ದೀರಿ ಎಂದೂ ಪ್ರಶ್ನಿಸಿದ್ದಾರೆ. ಕಳೆದ ತಿಂಗಳೂ ಕೇಜ್ರಿವಾಲ್ ಬ್ರಿಟನ್‌ನಿಂದ ವಿಮಾನಯಾನಗಳ ವಿರುದ್ಧ ಇಂತಹುದೇ ಎಚ್ಚರಿಕೆಯನ್ನು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News