ಬಸ್ಸಿನಲ್ಲಿ ಕಿರುಕುಳ: ಭಯದಿಂದ ಕೆಳಗೆ ಜಿಗಿದ ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ!

Update: 2021-01-08 06:55 GMT

ಗ್ರೇಟರ್ ನೊಯ್ಡಾ,ಜ.08:  ಖಾಸಗಿ ಬಸ್ ಒಂದರಲ್ಲಿ ಪ್ರಯಾಣಿಸುತ್ತಿರುವ ವೇಳೆ ನಾಲ್ಕು ಮಂದಿ ಯುವಕರ ವ್ಯಂಗ್ಯಭರಿತ ಮಾತುಗಳಿಂದ ಬೆದರಿದ 12ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಚಲಿಸುತ್ತಿರುವ ಬಸ್ಸಿನಿಂದ ರಸ್ತೆಗೆ ಹಾರಿದ ಘಟನೆ ವರದಿಯಾಗಿದೆ. ಒಬ್ಬಳು ವಿದ್ಯಾರ್ಥಿನಿಯ ಕೈ ಮತ್ತು ಕಾಲಿನ ಮೂಳೆ ಮುರಿದಿದ್ದರೆ ಇನ್ನೊಬ್ಬಾಕೆಯ ಸೊಂಟ, ಪಾದ ಹಾಗೂ ತಲೆಗೆ ಪೆಟ್ಟಾಗಿದೆ ಎಂದು timesofindia.com ವರದಿ ಮಾಡಿದೆ.

ಇಬ್ಬರು ವಿದ್ಯಾರ್ಥಿನಿಯರೂ ರನ್ಹೇರಾ ಗ್ರಾಮದಲ್ಲಿ ಬಸ್ ಹತ್ತಿದ್ದರು. ಬಸ್ಸಿನ ಮುಂಭಾಗದ ಸೀಟುಗಳಲ್ಲಿ ಕೆಲ ಯುವಕರು ಕುಳಿತಿದ್ದರಿಂದ ಮಧ್ಯ ಭಾಗದ ಸೀಟಿನಲ್ಲಿ ಇಬ್ಬರು ವಿದ್ಯಾರ್ಥಿನಿಯರೂ ಕುಳಿತಿದ್ದರು. ಆದರೆ ಬಸ್ ಬೀರಂಪುರ್ ಗ್ರಾಮದ ನಿಲ್ದಾಣ ತಲುಪುತ್ತಿದ್ದಂತೆಯೇ ತಮ್ಮ ಸಹಪಾಠಿಗಳು ಅಲ್ಲಿರುವುದನ್ನು ಗಮನಿಸಿ ಅವರೂ ಬಸ್ ಏರುವಂತಾಗಲು ಬಸ್ ನಿಲ್ಲಿಸುವಂತೆ ಚಾಲಕನಲ್ಲಿ ವಿನಂತಿಸಿದರೂ  ಆತ ಒಪ್ಪಲಿಲ್ಲ. ಅಷ್ಟರಲ್ಲಿ ಬಸ್ಸಿನಲ್ಲಿದ್ದ ಯುವಕರೂ "ಇಂದು ಬಸ್ ನಿಲ್ಲುವುದಿಲ್ಲ, ಮಜಾ ಆಗಲಿದೆ," ಎಂಬಿತ್ಯಾದಿ ಮಾತುಗಳನ್ನಾಡಿದಾಗ ಇಬ್ಬರು ವಿದ್ಯಾರ್ಥಿನಿಯರೂ ಏನೋ ತಪ್ಪಾಗಿದೆ ಎಂದು ಭಯಗೊಂಡು ಬಸ್ಸಿನ ಹಿಂಭಾಗಕ್ಕೆ ಓಡಿದರು. ನಂತರ ಮತ್ತೊಮ್ಮೆ  ಚಾಲಕನಲ್ಲಿ ಬಸ್ ನಿಲ್ಲಿಸುವಂತೆ ಹೇಳಿದರೂ  ಆತ ಚಲಾಯಿಸುತ್ತಲೇ ಇರುವುದನ್ನು  ನೋಡಿ ಭಯಗೊಂಡು ಬಸ್ಸಿನಿಂದ  ನೇರವಾಗಿ ಇಬ್ಬರು ವಿದ್ಯಾರ್ಥಿನಿಯರೂ ರಸ್ತೆಗೆ ಜಿಗಿದಿದ್ದರು. ಈ ವಿವರಗಳನ್ನು ಸಂತ್ರಸ್ತ ವಿದ್ಯಾರ್ಥಿನಿಯರೇ ನೀಡಿದ್ದಾರೆ.

ಆದರೆ ಎಫ್‍ಐಆರ್‍ನಲ್ಲಿ ಈ ಮಾಹಿತಿಯಿಲ್ಲವಾಗಿದ್ದು ಚಾಲಕ ಬಸ್ ನಿಲ್ಲಿಸದೆ ವೇಗವಾಗಿ ಓಡಿಸಲಾರಂಭಿಸಿದ ಎಂಬಷ್ಟೇ  ಬರೆಯಲಾಗಿದೆ.  ವಿದ್ಯಾರ್ಥಿನಿಯರ ಹೆತ್ತವರು ನೀಡಿದ ದೂರಿನಲ್ಲಿ ಯುವಕರ  ವ್ಯಂಗ್ಯದ ಮಾತುಗಳ ಬಗ್ಗೆ ಉಲ್ಲೇಖವಿಲ್ಲ ಎಂದೂ ಪೊಲೀಸರು ಹೇಳಿದ್ದಾರೆ.

ಘಟನೆಯ ಬಗ್ಗೆ ಬಸ್ ಚಾಲಕ ವಿದ್ಯಾರ್ಥಿನಿಯರ ಕುಟುಂಬದ ಬಳಿ ಕ್ಷಮೆಯಾಚಿಸಿದ್ದರಿಂದ  ಪ್ರಕರಣವನ್ನು ಹಾಗೆಯೇ ಇತ್ಯರ್ಥಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News