ನವೀನ್ ಪಟ್ನಾಯಕ್ ಹತ್ಯೆಗೆ ನಾಗಪುರ ನಿವಾಸಿಯಿಂದ ಸುಪಾರಿ

Update: 2021-01-08 16:26 GMT

ಭುವನೇಶ್ವರ, ಜ.8: ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹತ್ಯೆಗೆ ಸಂಚು ರೂಪಿಸಲಾಗಿದ್ದು ಬಾಡಿಗೆ ಹಂತಕರಿಗೆ ಸುಪಾರಿ ನೀಡಲಾಗಿದೆ ಎಂದು ಅನಾಮಧೇಯ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಸರಕಾರ ಹೇಳಿದೆ.

ಸಂಚು ರೂಪಿಸಿರುವ ಪಿತೂರಿಗಾರ ನಾಗಪುರದಲ್ಲಿ ವಾಸಿಸುತ್ತಿದ್ದಾನೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಬಾಡಿಗೆ ಹಂತಕರು ಮುಖ್ಯಮಂತ್ರಿಯ ಮೇಲೆ ಯಾವುದೇ ಕ್ಷಣದಲ್ಲಿ ದಾಳಿ ಎಸಗಬಹುದು ಎಂದು ಇಂಗ್ಲಿಷ್‌ನಲ್ಲಿ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ‘ಕೆಲ ಬಾಡಿಗೆ ಹಂತಕರು ನಿಮ್ಮನ್ನು ಕೊಲ್ಲಬಹುದು ಎಂದು ಮಾಹಿತಿ ನೀಡಲು ಇಚ್ಛಿಸುತ್ತೇನೆ. ಬಾಡಿಗೆ ಹಂತಕರು ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು ಎಕೆ-47 ಮತ್ತು ಅರೆ ಸ್ವಯಂಚಾಲಿತ ಪಿಸ್ತೂಲ್‌ಗಳಿಂದ ಸಜ್ಜಿತರಾಗಿದ್ದಾರೆ. ದಯವಿಟ್ಟು ಎಚ್ಚರಿಕೆ ವಹಿಸಿ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಜನವರಿ 5ರಂದು ಪತ್ರ ತಲುಪಿದ ಬಳಿಕ ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿ ಸಂತೋಷ್ ಬಾಲ ರಾಜ್ಯದ ಪೊಲೀಸ್ ಮಹಾನಿರ್ದೇಶಕರು, ಗುಪ್ತಚರ ಇಲಾಖೆಯ ಮಹಾನಿರ್ದೇಶಕರು ಹಾಗೂ ಭುವನೇಶ್ವರ ಪೊಲೀಸ್ ಆಯುಕ್ತರ ಸಭೆ ಕರೆದು ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿಯ ಮನೆ, ಕಚೇರಿ ಹಾಗೂ ಪ್ರವಾಸದ ಸಂದರ್ಭದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಸಂತೋಷ್ ಬಾಲ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News