ಎಲ್ಲರಿಗೂ ಉಚಿತ ಕೊರೋನ ಲಸಿಕೆ ನೀಡಿ: ಕೇಜ್ರಿವಾಲ್

Update: 2021-01-09 16:10 GMT

ಹೊಸದಿಲ್ಲಿ, ಜ. 9: ಕೊರೋನ ವೈರಸ್ ಸಾಂಕ್ರಾಮಿಕ ಈ ಶತಮಾನದ ಅತಿ ದೊಡ್ಡ ಸಾಂಕ್ರಾಮಿಕ ರೋಗ ಎಂದು ಒತ್ತಿ ಹೇಳಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕೇಂದ್ರ ಸರಕಾರ ಎಲ್ಲ ಭಾರತೀಯರಿಗೆ ಉಚಿತ ಲಸಿಕೆ ನೀಡುವ ಖಾತರಿ ನೀಡಬೇಕು ಎಂದಿದ್ದಾರೆ.

‘‘ಕೊರೋನ ಸಾಂಕ್ರಾಮಿಕ ರೋಗ ಈ ಶತಮಾನದ ಅತಿ ದೊಡ್ಡ ಸಾಂಕ್ರಾಮಿಕ ರೋಗ. ಇದರಿಂದ ನಮ್ಮ ಜನರನ್ನು ರಕ್ಷಿಸುವುದು ಅತಿ ಮುಖ್ಯ. ದೇಶದ ಎಲ್ಲ ಜನರಿಗೆ ಉಚಿತವಾಗಿ ಲಸಿಕೆ ನೀಡುವಂತೆ ನಾನು ಕೇಂದ್ರ ಸರಕಾರದಲ್ಲಿ ಮನವಿ ಮಾಡುತ್ತೇನೆ. ಇದಕ್ಕೆ ಮಾಡುವ ವೆಚ್ಚ ಅನೇಕ ಭಾರತೀಯರ ಜೀವ ಉಳಿಸಲು ನೆರವಾಗುತ್ತದೆ’’ ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ದಿಲ್ಲಿಯ ಎಲ್ಲ ನಿವಾಸಿಗಳಿಗೆ ಕೊರೋನ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಆಪ್ ನೇತೃತ್ವದ ರಾಜ್ಯ ಸರಕಾರ ಘೋಷಿಸಿದ ವಾರಗಳ ಬಳಿಕ ಅರವಿಂದ ಕೇಜ್ರಿವಾಲ್ ಈ ಆಗ್ರಹ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಕೇಂದ್ರ ಸರಕಾರ ಯೋಜಿಸಿದಂತೆ ಆರೋಗ್ಯ ಸೇವೆಯ ಕಾರ್ಯಕರ್ತರು, ಮುಂಚೂಣಿ ಕಾಯಕರ್ತರು ಹಾಗೂ ಅತಿ ಅಪಾಯದ ಗುಂಪಿಗೆ ಮಾತ್ರ ಲಸಿಕೆ ನೀಡುವ ಬದಲು ಉಚಿತ ಹಾಗೂ ಸಾಮೂಹಿಕ ಲಸಿಕೆ ನೀಡಬೇಕೆಂಬ ಬೇಡಿಕೆ ವ್ಯಕ್ತಪಡಿಸಿದ ರಾಜಕೀಯ ಪಕ್ಷಗಳ ಪಟ್ಟಿಯಲ್ಲಿ ಈಗ ಆಪ್ ಕೂಡ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News