ಹೈದರಾಬಾದ್: ಶೇಂದಿ ಕುಡಿದು ಓರ್ವ ಸಾವು, 144 ಜನರು ಅಸ್ವಸ್ಥ
Update: 2021-01-10 23:43 IST
ಹೈದರಾಬಾದ್, ಜ. 10: ವಿಕರಾಬಾದ್ ಜಿಲ್ಲೆಯ ಸಮೀಪ ಕಲಬೆರಕೆ ಶೇಂದಿ ಕುಡಿದ ಪರಿಣಾಮ 55 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮಹಿಳೆಯರು ಸೇರಿದಂತೆ 143 ಮಂದಿ ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಶೇಂದಿ ಕುಡಿದ ಬಳಿಕ ಕೆಲವರು ಪ್ರಜ್ಞೆ ಕಳೆದುಕೊಂಡರು. ಇನ್ನು ಕೆಲವರಿಗೆ ವಾಕರಿಕೆ ಅನುಭವಕ್ಕೆ ಬಂತು. ಮತ್ತೆ ಕೆಲವರು ವಾಂತಿ ಮಾಡಿದರು. ಇವರನ್ನೆಲ್ಲಾ ಶುಕ್ರವಾರದಿಂದ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇವರಲ್ಲಿ 19 ಮಂದಿಗೆ ಹೊರ ರೋಗಿಗಳಾಗಿ ಚಿಕಿತ್ಸೆ ನೀಡಲಾಗಿದೆ. ಇತರರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ವ್ಯಕ್ತಿಯ ಸಾವಿನ ಖಚಿತ ಕಾರಣ ತಿಳಿದು ಬರಲಿದೆ. ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.