ಹಿಮಾಚಲದಲ್ಲಿ 4 ಸಾವಿರ ಹಕ್ಕಿಗಳ ಸಾವು: ಮಹಾರಾಷ್ಟ್ರದಲ್ಲಿ ಕುಕ್ಕುಟ ಸಂಹಾರಕ್ಕೆ ಆದೇಶ

Update: 2021-01-11 03:36 GMT

ಶಿಮ್ಲಾ/ ಮುಂಬೈ : ಹಿಮಾಚಲ ಪ್ರದೇಶದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ವಲಸೆ ಹಕ್ಕಿಗಳು ಶಂಕಿತ ಹಕ್ಕಿಜ್ವರದಿಂದ ಸತ್ತಿರುವುದಾಗಿ ಸರ್ಕಾರ ಪ್ರಕಟಿಸಿದೆ. ಏತನ್ಮಧ್ಯೆ ನಿರೀಕ್ಷೆಗಿಂತ ವೇಗವಾಗಿ ವೈರಸ್ ಹರಡುತ್ತಿರುವುದಕ್ಕೆ ಸ್ಪಷ್ಟ ಪುರಾವೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಆಯ್ದ ಕಡೆಗಳಲ್ಲಿ ಕೋಳಿಗಳ ಹತ್ಯೆಗೆ ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ.

ವಲಸೆ ಹಕ್ಕಿಗಳು ಆಗಮಿಸುವ ಹಲವು ರಾಜ್ಯಗಳು ಕ್ಷಿಪ್ರ ಸ್ಪಂದನೆ ತಂಡಗಳನ್ನು ರಚಿಸಿದ್ದು, ಹಿಮಾಚಲ ಪ್ರದೇಶ, ಗುಜರಾತ್, ರಾಜಸ್ಥಾನ ಮತ್ತಿತರ ರಾಜ್ಯಗಳಲ್ಲಿ ಹಕ್ಕಿಗಳ ಕಳೇಬರದ ರಾಶಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಲಸೆ ಹಕ್ಕಿಗಳ ತಾಣಗಳ ಮೇಲೆ ಹದ್ದಿನಕಣ್ಣು ಇರಿಸಿವೆ. ಹಿಮಾಚಲ ಪ್ರದೇಶದಲ್ಲಿ 4,020 ವಲಸೆ ಹಕ್ಕಿಗಳು, 86 ಕಾಗೆಗಳು ಮತ್ತು ಎರಡು ಬೆಳ್ಳಕ್ಕಿಗಳು ಕಂಗ್ರಾ, ಮಂಡಲಿ, ಬಿಲಾಸ್‌ಪುರ ಮತ್ತು ಶಿರ್ಮೂರು ಜಿಲ್ಲೆಗಳಲ್ಲಿ ಮೃತಪಟ್ಟಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.

ಕಾಗೆ ಮತ್ತು ಇತರ ಸಾಮಾನ್ಯ ಹಕ್ಕಿಗಳು ಉತ್ತರ ಪ್ರದೇಶದಲ್ಲೂ ಸಾಯುತ್ತಿವೆ. ರಾಜ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ವಲಸೆ ಹಕ್ಕಿಗಳಿರುವ ಜೌಗುಪ್ರದೇಶ ಇರುವ ಹಿನ್ನೆಲೆಯಲ್ಲಿ ಇದು ಸೋಂಕಿನ ಮೂಲವಾಗುವ ಸಾಧ್ಯತೆ ಇದೆ. ದುಧ್ವಾ ರಾಷ್ಟ್ರೀಯ ಉದ್ಯಾನದಲ್ಲಿ 400ಕ್ಕೂ ಹೆಚ್ಚು ಪ್ರಬೇಧಗಳ ಹಕ್ಕಿಗಳಿದ್ದು, ಅರಣ್ಯ ಇಲಾಖೆ ಜಾಗರೂಕತೆಯಿಂದ ವೀಕ್ಷಿಸುತ್ತಿದೆ. ಉತ್ತರ ಪ್ರದೇಶದ ಕಾನ್ಪುರ ಮೃಗಾಲಯದಲ್ಲಿ ಎರಡು ಹಕ್ಕಿಜ್ವರ ಪ್ರಕರಣಗಳು ದೃಢಪಟ್ಟಿವೆ.

ಕೋಳಿ ಫಾರಂಗಳ ಮೇಲೆ ಕಣ್ಣಿಡುವ ಸಲುವಾಗಿ ಮೀರಠ್‌ನಲ್ಲಿ ಕ್ಷಿಪ್ರ ಸ್ಪಂದನೆ ಪಡೆಗಳನ್ನು ನಿಯೋಜಿಸಲಾಗಿದೆ. ಗುಜರಾತ್‌ನಲ್ಲಿ ಕೂಡಾ ಸಾವಿನ ಸಂಖ್ಯೆ ಹೆಚ್ಚಿದ್ದು, ಕಚ್, ರಾಜಕೋಟ್, ಗೀರ್ ಸೋಮನಾಥ್ ಮತ್ತು ವಡೋದರದಿಂದ ಹೆಚ್ಚಿನ ಸಂಖ್ಯೆಯ ಸಾವು ವರದಿಯಾಗುತ್ತಿವೆ. ರಾಜ್ಯದ ನಾಲ್ಕು ಪಕ್ಷಿಧಾಮಗಳನ್ನು ಮತ್ತು ಎಲ್ಲ ಮೃಗಾಲಯಗಳ ಪಕ್ಷಿ ವಿಭಾಗಗಳನ್ನು ಮುಚ್ಚಲು ಸರ್ಕಾರ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News