ಹಿಂದೂ ಮಹಾಸಭಾದಿಂದ ಗೋಡ್ಸೆ ಜ್ಞಾನಶಾಲೆ !

Update: 2021-01-11 04:41 GMT
(Photo - Express) 
 

ಭೋಪಾಲ್ : ಮಹಾತ್ಮಗಾಂಧಿ ಹಂತಕ ನಾಥೂರಾಂ ಗೋಡ್ಸೆಯ ಜನ್ಮದಿನ ಆಚರಿಸಿ, ಆತನನ್ನು ಗಲ್ಲಿಗೇರಿಸಿದ ದಿನವನ್ನು ಬಲಿದಾನ ದಿವಸವಾಗಿ ಘೋಷಿಸಿದ ಬಳಿಕ ಅಖಿಲ ಭಾರತ ಹಿಂದೂ ಮಹಾಸಭಾ ಇದೀಗ ತನ್ನ ಗ್ವಾಲಿಯರ್ ಕಚೇರಿಯಲ್ಲಿ ಮಹಾತ್ಮಾಗಾಂಧೀಜಿಯವರ ಹತ್ಯೆ ಸಿದ್ಧಾಂತವನ್ನು ಪ್ರಚುರಪಡಿಸುವ ಉದ್ದೇಶದ ಗೋಡ್ಸೆ ಜ್ಞಾನ ಶಾಲಾ ಆರಂಭಿಸಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಗ್ರಂಥಾಲಯವನ್ನು ಹೋಲುವ ಗೋಡ್ಸೆ ಜ್ಞಾನಶಾಲಾವನ್ನು ರವಿವಾರ ಮಧ್ಯಪ್ರದೇಶದ ಗ್ವಾಲಿಯರ್‌ನ ದೌಲತ್‌ಗಂಜ್‌ನಲ್ಲಿರುವ ಹಿಂದೂ ಮಹಾಸಭಾ ಕೇಂದ್ರ ಕಚೇರಿಯಲ್ಲಿ ಆರಂಭಿಸಲಾಗಿದೆ.

ಹಿಂದೂ ಮಹಾಸಭಾ ಕಚೇರಿಯಲ್ಲಿ ನಾಥೂರಾಂ ಘೋಡ್ಸೆ ಭಾವಚಿತ್ರಕ್ಕೆ ಮತ್ತು ಗೋಡ್ಸೆಗೆ ಪ್ರೇರಣೆ ನೀಡಿದ ಮುಖಂಡರ ಭಾವಚಿತ್ರಗಳಿಗೆ ಪುಷ್ಪಹಾರ ಹಾಕುವ ಮೂಲಕ ಜ್ಞಾನಶಾಲಾ ಉದ್ಘಾಟಿಸಲಾಯಿತು.

ಗುರುಗೋವಿಂದ್ ಸಿಂಗ್, ಮಹಾರಾಣಾ ಪ್ರತಾಪ್, ಆರೆಸ್ಸೆಸ್ ಸಂಸ್ಥಾಪಕ ಕೆ.ಬಿ. ಹೆಡಗೇವಾರ್, ಲಾಲಾ ಲಜಪತ್‌ರಾಯ್, ಪಂಡಿತ್ ಮದನ್ ಮೋಹನ್ ಮಾಳವೀಯ ಮತ್ತಿತರರ ಭಾವಚಿತ್ರಗಳಿಗೆ ಪುಷ್ಪಹಾರ ಹಾಕಲಾಯಿತು. "ಜ್ಞಾನಶಾಲೆ ಗೋಡ್ಸೆ, ನಾರಾಯಣ ಆಪ್ಟೆ ಅವರ ಭಾವಚಿತ್ರ ಹೊಂದಿರುವುದು ಮಾತ್ರವಲ್ಲದೇ ಜನಸಂಘ ಸಂಸ್ಥಾಪಕ ಸದಸ್ಯ ಶ್ಯಾಮ್‌ಪ್ರಸಾದ್ ಮುಖರ್ಜಿಯವರ ಭಾವಚಿತ್ರವನ್ನೂ ಹೊಂದಿರುತ್ತದೆ.

ಪ್ರಸಕ್ತ ಮತ್ತು ಭವಿಷ್ಯದ ಪೀಳಿಗೆಯಲ್ಲಿ ರಾಷ್ಟ್ರೀಯತೆಯ ಸ್ಫೂರ್ತಿಯನ್ನು ತುಂಬುವುದು ಇದರ ಉದ್ದೇಶ" ಎಂದು ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭಾರಧ್ವಜ್ ಹೇಳಿದ್ದಾರೆ.

ಜ್ಞಾನಶಾಲಾದಲ್ಲಿ ಚಿತ್ರಗಳ ಜತೆಗೆ ಗೋಡ್ಸೆ ಮತ್ತು ಆಪ್ಟೆಯವರ ಕ್ರಾಂತಿಕಾರಿ ಚಿಂತನೆಗಳ ಬಗ್ಗೆ ಯುವಕರಿಗೆ ಶಿಕ್ಷಣ ನೀಡುವ ಅವರ ಬರಹಗಳು ಕೂಡಾ ಪುಸ್ತಕರೂಪದಲ್ಲಿ ಇರುತ್ತವೆ. ನೇತಾಜಿ ಸುಭಾಸ್‌ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23ರಂದು ಜ್ಞಾನಶಾಲಾದಲ್ಲಿ ಪುಸ್ತಕಗಳ ಅನಾವರಣ ಇರುತ್ತದೆ ಎಂದು ವಿವರಿಸಿದ್ದಾರೆ.

ಈ ಬೆಳವಣಿಗೆಯನ್ನು ಖಂಡಿಸಿರುವ ಗ್ವಾಲಿಯರ್ ಕಾಂಗ್ರೆಸ್ ಶಾಸಕ ಡಾ.ಗೋವಿಂದ್ ಸಿಂಗ್, "ರಾಜ್ಯದ ಬಿಜೆಪಿ ಸರ್ಕಾರ ಗಾಂಧಿ ಹಂತಕರಿಂದ ಸ್ಫೂರ್ತಿ ಪಡೆದು ಧೈರ್ಯಶಾಲಿಯಾಗಿದೆ" ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಮಾಫಿಯಾ ಧ್ವಂಸ ಕಾರ್ಯಾಚರಣೆ ಬಗ್ಗೆ ಹೇಳಿಕೊಳ್ಳುತ್ತಿರುವ ಸಿಎಂ, ಗಾಂಧಿಹಂತಕರ ವೈಭವೀಕರಣವನ್ನು ಹೇಗೆ ಸಹಿಸಿಕೊಳ್ಳುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News