ಅಮೆರಿಕದ ಸಂಸತ್ ಮೇಲೆ ಟ್ರಂಪ್ ಬೆಂಬಲಿಗರ ದಾಳಿ: ಪತ್ನಿ ಮೆಲಾನಿಯಾ ಹೇಳಿದ್ದೇನು ಗೊತ್ತೇ?
ವಾಷಿಂಗ್ಟನ್: ಕಳೆದ ವಾರ ತನ್ನ ಪತಿಯ ಬೆಂಬಲಿಗರು ಕ್ಯಾಪಿಟಲ್(ಅಮೆರಿಕದ ಸಂಸತ್)ಮೇಲೆ ನಡೆಸಿರುವ ದಾಳಿಯಿಂದ ನನಗೆ ತೀವ್ರ ಬೇಸರವಾಗಿದೆ ಎಂದು ಮೆಲಾನಿಯಾ ಟ್ರಂಪ್ ಸೋಮವಾರ ಹೇಳಿದ್ದಾರೆ.
ಟ್ರಂಪ್ ಅಧ್ಯಕ್ಷ ಚುನಾವಣೆಯಲ್ಲಿ ಸೋತ ಆಕ್ರೋಶದಲ್ಲಿ ಟ್ರಂಪ್ ಬೆಂಬಲಿಗರು ಹಿಂಸಾಚಾರ ನಡೆಸಿದ ಐದು ದಿನಗಳ ಬಳಿಕ ಮೌನ ಮುರಿದ ಮೆಲಾನಿಯಾ, ಈ ದುರಂತ ಘಟನೆಯನ್ನು ಕೆಲವರು ನನ್ನ ಕುರಿತು ಗಾಸಿಪ್, ಅನಗತ್ಯ ವೈಯಕ್ತಿಕ ದಾಳಿ ಹಾಗೂ ಸುಳ್ಳು, ದಾರಿ ತಪ್ಪಿಸುವ ಆರೋಪಗಳನ್ನು ಹರಡಲು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ವಾರ ನಡೆದಿರುವ ಘಟನೆಯಿಂದ ನನಗೆ ತುಂಬಾ ಬೇಸರವಾಗಿದೆ. ಈ ದುರಂತ ಘಟನೆಯ ಸುತ್ತಲೂ ಗಾಸಿಪ್ ಗಳು, ಅನಗತ್ಯವಾದ ವೈಯಕ್ತಿಕ ದಾಳಿಗಳು ಹಾಗೂ ನನ್ನ ಮೇಲೆ ತಪ್ಪಾದ ದಾರಿತಪ್ಪಿಸುವ ಆರೋಪಗಳು ನಡೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನಿರ್ದಿಷ್ಟ ಕಾರ್ಯಸೂಚಿ ಹೊಂದಿರುವ ಜನರು ಈ ಕೆಲಸ ಮಾಡಿದ್ದಾರೆ. ನಮ್ಮ ರಾಷ್ಟ್ರದ ಕ್ಯಾಪಿಟಲ್ ನಲ್ಲಿ ಆಗಿರುವ ಹಿಂಸಾಚಾರವನ್ನು ನಾನು ಸಂಪೂರ್ಣವಾಗಿ ಖಂಡಿಸುತ್ತೇನೆ. ಹಿಂಸೆ ಎಂದಿಗೂ ಸ್ವೀಕಾರಾರ್ಹವಲ್ಲ. ಈ ಘಟನೆಯನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಬಾರದು ಎಂದು ಹೇಳಿಕೆಯೊಂದರಲ್ಲಿ ಮೆಲಾನಿಯಾ ತಿಳಿಸಿದರು.
ತನ್ನ ಮಾಜಿ ಸ್ನೇಹಿತೆ ಹಾಗೂ ವೈಟ್ ಹೌಸ್ ನಲ್ಲಿ ಸಹಾಯಕರಾಗಿದ್ದ ಸ್ಟೆಫನಿ ವಿನ್ಸನ್ ವೋಲ್ಕಾಫ್ ಅವರು ‘ಅಮೆರಿಕದ ವಿನಾಶಕ್ಕೆ ಟ್ರಂಪ್ ಪತ್ನಿ ಸಹಕರಿಸಿದ್ದಾರೆ’ ಎಂದು ಸಂಪಾದಕೀಯದಲ್ಲಿ ಬರೆದಿರುವುದನ್ನುಉಲ್ಲೇಖಿಸಿ ಮೆಲಾನಿಯ ಈ ಹೇಳಿಕೆ ನೀಡಿದ್ದಾರೆ.