ಚೀನಾ-ಪಾಕ್ ಸಹಭಾಗಿತ್ವದ ಬೆದರಿಕೆ ಎದುರಿಸಲು ಸನ್ನದ್ಧ: ಸೇನಾ ಮುಖ್ಯಸ್ಥ ನರವಾಣೆ

Update: 2021-01-12 17:46 GMT

ಹೊಸದಿಲ್ಲಿ, ಜ.12: ಚೀನಾ ಮತ್ತು ಪಾಕಿಸ್ತಾನದ ಮಧ್ಯೆ ಮಿಲಿಟರಿ ಮತ್ತು ಇತರ ಕ್ಷೇತ್ರಗಳಲ್ಲಿ ಸಹಭಾಗಿತ್ವ ಹೆಚ್ಚುತ್ತಿದೆ. ಎರಡೂ ದೇಶಗಳ ಸಹಭಾಗಿತ್ವದಿಂದ ಎದುರಾಗಿರುವ ಬೆದರಿಕೆಯನ್ನು ಎದುರಿಸಲು ಭಾರತ ಸನ್ನದ್ಧವಾಗಿರಬೇಕಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಹೇಳಿದ್ದಾರೆ.

ಸೇನಾ ದಿನಾಚರಣೆಗೂ ಮುನ್ನ ನಡೆಯುವ ವಾರ್ಷಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಲಡಾಖ್‌ನಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿರುವ ಪ್ರದೇಶಗಳಿಂದ ಭಾರತ ಅಥವಾ ಚೀನಾ ದೇಶಗಳು ತಮ್ಮ ಸೇನಾಬಲವನ್ನು ಕಡಿತಗೊಳಿಸಿಲ್ಲ ಎಂದರು. ಪ್ರತೀ ವರ್ಷ ಚೀನಾದ ಸೇನೆ ಸಾಂಪ್ರದಾಯಿಕ ತರಬೇತಿ ಪ್ರದೇಶಗಳಿಗೆ ಆಗಮಿಸಿ, ತರಬೇತಿ ಪೂರ್ಣಗೊಂಡ ಬಳಿಕ ಹಾಗೂ ಚಳಿಗಾಲದ ಆರಂಭದಲ್ಲಿ ಇಲ್ಲಿಂದ ಮರಳುತ್ತವೆ. ಆದರೆ ಲಡಾಕ್ ಪ್ರದೇಶದಲ್ಲಿ ಚೀನಾದ ಸೇನಾಬಲದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪರಸ್ಪರ ಮತ್ತು ಸಮಾನ ಭದ್ರತೆಯ ಆಧಾರದಲ್ಲಿ ಭಾರತ-ಚೀನಾ ಮಧ್ಯೆ ಮಾತುಕತೆ ಮುಂದುವರಿದಿದ್ದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದೆ. ಈ ಮೂಲಕ ಪರಸ್ಪರ ಸೇನೆ ಹಿಂದೆಗೆತ ಮತ್ತು ಸೇನಾಬಲ ಕಡಿತಗೊಳಿಸುವ ಪ್ರಕ್ರಿಯೆ ಆರಂಭವಾಗಲಿದೆ. ಬಿಕ್ಕಟ್ಟಿಗೆ ಕಾರಣವಾದ ಸ್ಥಳಗಳಲ್ಲಿ ಸೇನಾಬಲ ಕಡಿತ ಸಾಧ್ಯವಾದರೆ, ಬಳಿಕ ಸಂಪೂರ್ಣ ಪ್ರದೇಶದಲ್ಲಿ ಸೇನಾಬಲ ಕಡಿತಕ್ಕೆ ಮುನ್ನುಡಿ ಬರೆಯಬಹುದಾಗಿದೆ ಎಂದವರು ಹೇಳಿದ್ದಾರೆ.

ಪೂರ್ವ ಲಡಾಖ್‌ನಲ್ಲಿ ಯಥಾಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನಮ್ಮ ರಾಷ್ಟ್ರೀಯ ಗುರಿ ಮತ್ತು ಉದ್ದೇಶ ಈಡೇರುವವರೆಗೂ ನಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಸನ್ನದ್ಧರಾಗಿದ್ದೇವೆ. ಲಡಾಖ್‌ನ ಎತ್ತರದ ಪ್ರದೇಶದಲ್ಲಿ ನಾವು ಹೆಚ್ಚಿನ ಯೋಧರನ್ನು ಹೊಂದಿದ್ದರೂ ಚಳಿಯ ಸಮಸ್ಯೆಯಿಂದ ದುರ್ಘಟನೆಗಳು ಹೆಚ್ಚಿವೆ. ಉತ್ತರದ ಗಡಿಯುದ್ದಕ್ಕೂ ನಾವು ಅತೀ ಎಚ್ಚರ ವಹಿಸಿದ್ದೇವೆ. ವಾಸ್ತವ ನಿಯಂತ್ರಣ ರೇಖೆಯ ಕೇಂದ್ರ ಮತ್ತು ಪೂರ್ವದ ಭಾಗದಲ್ಲಿ ಘರ್ಷಣೆ ನಡೆಯುವ ಸ್ಥಳಗಳಿದ್ದು ಇಲ್ಲಿ ಚೀನಾ ಮೂಲಸೌಕರ್ಯ ಅಭಿವೃದ್ಧಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News