ಅಪಘಾತದಲ್ಲಿ ಕಾಲು ಕಳೆದುಕೊಂಡ ವ್ಯಕ್ತಿಗೆ 52 ಲಕ್ಷ ರೂ. ಪರಿಹಾರ

Update: 2021-01-13 04:35 GMT

ಮುಂಬೈ: ಬಸ್ ಅಪಘಾತದಲ್ಲಿ ತಮ್ಮ ಬಲಗಾಲು ಕಳೆದುಕೊಂಡ 41 ವರ್ಷ ವಯಸ್ಸಿನ ಹಿರಿಯ ವ್ಯವಹಾರ ವಿಶ್ಲೇಷಕರೊಬ್ಬರಿಗೆ ರಜೆಯಿಂದ ಆದ ನಷ್ಟ ಸೇರಿದಂತೆ 52 ಲಕ್ಷ ರೂ. ಪರಿಹಾರ ನೀಡುವಂತೆ ಮೋಟಾರು ವಾಹನ ಅಪಘಾತ ಕ್ಲೇಮ್‌ಗಳ ನ್ಯಾಯಮಂಡಳಿ ಆದೇಶ ನೀಡಿದೆ.

ಚೆಂಬೂರಿನ ಗುರುನಾಥ್ ಶೆಟ್ಟಿ ಎಂಬವರು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಐಷಾರಾಮಿ ಬಸ್ಸು, ಟೆಂಪೊಗೆ ಢಿಕ್ಕಿ ಹೊಡೆದಾಗ ಗುರುನಾಥ್ ಅವರ ಬಲಗಾಲು ತುಂಡಾಗಿತ್ತು. "ಅರ್ಜಿದಾರರು ಕನಿಷ್ಠ 30 ದಿನಗಳ ವೈದ್ಯಕೀಯ ರಜೆಯನ್ನು ಚಿಕಿತ್ಸೆಗಾಗಿ ಬಳಸಿರುತ್ತಾರೆ. ಅಂತೆಯೇ ಅರ್ಜಿದಾರ 14 ದಿನಗಳ ತಮ್ಮ ಹಕ್ಕಿನ ರಜೆಯನ್ನೂ ಚಿಕಿತ್ಸೆಗಾಗಿ ವ್ಯಯಿಸಿದ್ದಾರೆ. ಇತರ ಉದ್ದೇಶಗಳಿಗೆ ಪಡೆಯಬಹುದಾಗಿದ್ದ ರಜೆಯನ್ನು ಇದಕ್ಕೆ ಬಳಸಿಕೊಳ್ಳಬೇಕಾಗಿ ಬಂದಿತ್ತು" ಎಂದು ನ್ಯಾಯಮಂಡಳಿ ಆದೇಶದಲ್ಲಿ ಹೇಳಿದೆ.

ವಿಆರ್‌ಎಲ್ ಲಾಜಿಸ್ಟಿಕ್ಸ್, ವಿಮಾ ಕಂಪನಿಯಾದ ಯುನೈಡೆಟ್ ಇಂಡಿಯಾ ಇನ್ಶೂರೆನ್ಸ್ ಕಂಪನಿ, ಟೆಂಪೊ ಮಾಲಕ ನಮಕ್ಕಲ್ ಟ್ರಾನ್ಸ್‌ಪೋರ್ಟ್ ಕ್ಯಾರಿಯರ್ಸ್‌ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ವಿಮಾ ಕಂಪನಿಯಾದ ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ವಿರುದ್ಧ 2013ರ ಮಾರ್ಚ್‌ನಲ್ಲಿ ದೂರು ಸಲ್ಲಿಸಿದ್ದರು. 2012ರ ಅಕ್ಟೋಬರ್ 29ರಂದು ಮುಂಜಾನೆ 4 ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸೂಕ್ತ ಸೌಲಭ್ಯಗಳನ್ನು ಒದಗಿಸದೇ ಇದ್ದುದಕ್ಕಾಗಿ ವಿಧಿಸಿದ ಎರಡು ಲಕ್ಷ ರೂ. ದಂಡ ಕೂಡಾ 52 ಲಕ್ಷದಲ್ಲಿ ಸೇರಿದೆ.

ಸಾಮಾನ್ಯ ವ್ಯಕ್ತಿಗಳು ಮಾಡುವ ಹಲವು ಕೆಲಸಗಳನ್ನು ಅರ್ಜಿದಾರರು ಇದೀಗ ಮಾಡಲು ಸಾಧ್ಯವಿಲ್ಲ ಎನ್ನುವುದು ಪುರಾವೆಗಳಿಂದ ದೃಢಪಟ್ಟಿದೆ. ಇದರಿಂದಾಗಿ ಜೀವನದ ಮನೋರಂಜನೆ ಹಾಗೂ ವೈವಾಹಿಕ ಜೀವನಕ್ಕೆ ತೊಂದರೆಯಾಗಿದೆ. ಹಲವು ವರ್ಷಗಳ ಕಾಲ ಯಾವುದೇ ಸೌಲಭ್ಯ ಇಲ್ಲದೇ ಜೀವನ ಸಾಗಿಸಬೇಕಾಯಿತು. ಕಾಲಿಗೆ ಆಗಿರುವ ಗಾಯ ಅವರ ಆಯುಷ್ಯವನ್ನೂ ಕಡಿಮೆ ಮಾಡಿದೆ" ಎಂದು ನ್ಯಾಯ ಮಂಡಳಿ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News