ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಸುರಕ್ಷತೆ,ಸಾಮರ್ಥ್ಯ ಕುರಿತ ಆರ್ ಟಿಐ ಅರ್ಜಿಗೆ ಉತ್ತರವಿಲ್ಲ!

Update: 2021-01-13 08:47 GMT

ಹೊಸದಿಲ್ಲಿ,ಜ.13: ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ನ ಸಿಂಧುತ್ವ, ಪರಿಣಾಮಕಾರಿತ್ವ, ಸುರಕ್ಷತೆ ಹಾಗೂ ಟ್ರಯಲ್ ಡಾಟಾದ ಕುರಿತಾದಂತೆ ಆರ್ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ 48 ಗಂಟೆಯೊಳಗೆ ಉತ್ತರ ದೊರಕದ್ದರ ಕುರಿತು ಅವರು ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆ, ಆರೋಗ್ಯ ಸೇವಾ ನಿರ್ದೇಶಕರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ನ ಪರಿಣಾಮಕಾರಿತ್ವ, ಸುರಕ್ಷತೆ ಹಾಗೂ ಟ್ರಯಲ್ ಡಾಟಾಗಳ ಕುರಿತು 48 ಗಂಟೆಯೊಳಗಡೆ ಮಾಹಿತಿ ನೀಡುವಂತೆ ಅವರು ಸೂಚಿಸಿದ್ದರು.

ಜೊತೆಗೆ, ಈ ಎರಡು ಲಸಿಕೆಗಳ ಬಳಕೆಯ ಕುರಿತಾದಂತೆ ತಜ್ಞರ ಸಮಿತಿಯು ಔಷಧ ನಿಯಂತ್ರಣ ಸಂಸ್ಥೆಗೆ ಸಲ್ಲಿಸಿದ ವರದಿಯನ್ನೂ ನೀಡುವಂತೆ ಕೋರಿದ್ದರು. ಕೋವಿಡ್ ಲಸಿಕೆಯನ್ನು ಇನ್ನು ಒಂದೆರಡು ವಾರಗಳಲ್ಲಿ ದೇಶಾದ್ಯಂತ ನೀಡಲಾಗುವುದರಿಂದ ಸಾರ್ವಜನಿಕರ ಸುರಕ್ಷತೆಯ ಕುರಿತಾದಂತೆ ಈ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ 48 ಗಂಟೆಗಳು ಕಳೆದರೂ ಈ ಕುರಿತು ಉತ್ತರ ನೀಡದಿರುವುದರ ಕುರಿತು ಸಾಕೇತ್ ಗೋಖಲೆ ಸಾಮಾಜಿಕ ತಾಣದಲ್ಲಿ ತಿಳಿಸಿದ್ದಾರೆ. 

“ಇದು ಜನಸಾಮಾನ್ಯರ ಜೀವದ ಕುರಿತಾಗಿರುವ ಕಾರಣ ನಾನು ಈ ಕುರಿತಾದಂತೆ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಲಿದ್ದೇನೆ ಎಂದೂ ಸಾಕೇತ್ ಗೋಖಲೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News