ತಮಗೇನು ಬೇಕು ಅನ್ನುವುದೇ ತಿಳಿಯದ ರೈತರು ವೃಥಾ ಪ್ರತಿಭಟನೆ ನಡೆಸುತ್ತಿದ್ದಾರೆ: ಹೇಮಾ ಮಾಲಿನಿ

Update: 2021-01-13 10:56 GMT

ಹೊಸದಿಲ್ಲಿ,ಜ.13: ನೂತನ ಕೃಷಿ ಕಾನೂನುಗಳಲ್ಲಿ ಏನು ದೋಷವಿದೆ ಅಥವಾ ತಮಗೇನು ಬೇಕು ಎಂಬುದು ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ರೈತರಿಗೆ ತಿಳಿದಿಲ್ಲ, ಅವರನ್ನು ಪ್ರತಿಭಟಿಸಲು ಪ್ರಚೋದಿಸಲಾಗುತ್ತಿದೆ ಎಂದು ಬಾಲಿವುಡ್ ಹಿರಿಯ ನಟಿ ಹಾಗೂ ಮಥುರಾ ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ. ಅದೇ ವೇಳೆ ಮೂರು ವಿವಾದಾತ್ಮಕ ಕಾನೂನುಗಳ ಜಾರಿಗೆ ತಡೆ ಹೇರಲು ಸುಪ್ರೀಂ ಕೋರ್ಟ್ ಕೈಗೊಂಡಿರುವ ನಿರ್ಧಾರವನ್ನೂ ಶ್ಲಾಘಿಸಿದ ಅವರು ಇದು ರೈತರ ಆಕ್ರೋಶವನ್ನು ತಗ್ಗಿಸಲು ಸಹಾಯ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪಂಜಾಬ್‍ನಲ್ಲಿ ಉದ್ರಿಕ್ತ ಪ್ರತಿಭಟನಾಕಾರರಿಂದ ಮೊಬೈಲ್ ಫೋನ್ ಟವರ್ ಗಳಿಗೆ ಉಂಟಾಗಿರುವ ಹಾನಿಯನ್ನು ಅವರು ಖಂಡಿಸಿದ್ದಾರೆ.

"ಸುಪ್ರೀಂ ಕೋರ್ಟ್ ಕಾನೂನುಗಳನ್ನು ತಡೆ ಹಿಡಿದಿದ್ದು ಒಳ್ಳೆಯದಾಯಿತು. ಇದು ರೈತರ ಆಕ್ರೋಶವನ್ನು ತಗ್ಗಿಸಬಹುದೆಂಬ ನಿರೀಕ್ಷೆಯಿದೆ. ಅಷ್ಟೆಲ್ಲಾ ಮಾತುಕತೆಗಳು ನಡೆದ ನಂತರವೂ ರೈತರು ಸಹಮತಕ್ಕೆ ಬರುತ್ತಿಲ್ಲ. ಅವರಿಗೇನು ಬೇಕೆಂದು ಹಾಗೂ ಈ ಕಾನೂನುಗಳಲ್ಲಿ ಏನು ಸಮಸ್ಯೆಯಿದೆಯೆಂಬುದೇ ಅವರಿಗೆ ತಿಳಿದಿಲ್ಲ. ಇದರರ್ಥ ಬೇರೆ ಯಾರೋ ಅವರನ್ನು ಹೀಗೆ ಮಾಡಿಸುತ್ತಿದ್ದಾರೆ," ಎಂದು ಹೇಮಾ ಮಾಲಿನಿ ಹೇಳಿದ್ದಾರೆ.

 "ಪಂಜಾಬ್ ಬಹಳಷ್ಟು ನಷ್ಟ ಅನುಭವಿಸಿದೆ. ಅವರು (ರೈತರು) ಟವರ್‍ಗಳಿಗೆ ಹಾನಿಯೆಸಗಿದ್ದು ಸರಿಯಲ್ಲ. ಸರಕಾರ ಅವರನ್ನು ಮಾತುಕತೆಗಳಿಗೆ ಸತತ ಕರೆದಿದ್ದರೂ ಪ್ರತಿಭಟನಾಕಾರರಿಗೆ ಯಾವುದೇ ಅಜೆಂಡಾ ಕೂಡ ಇಲ್ಲ," ಎಂದು ಹೇಮಾಮಾಲಿನಿ ಅಭಿಪ್ರಾಯ ಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News