ಮುಸ್ಲಿಮರು ಭಾರತದಲ್ಲಿರಬೇಕಾದರೆ ಕುರ್ ಆನ್, ನಮಾಝ್ ತ್ಯಜಿಸಬೇಕು ಎಂದ ಆನಂದ್ ಸ್ವರೂಪ್ ಸ್ವಾಮಿ

Update: 2021-01-13 15:32 GMT

ಹೊಸದಿಲ್ಲಿ,ಜ.13: ಮುಸ್ಲಿಮರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಬಹಿಷ್ಕರಿಸಬೇಕು ಎಂದು ಬಹಿರಂಗವಾಗಿ ಕರೆ ನೀಡಿದ ಹಿಂದೂ ಧರ್ಮಗುರು ಆನಂದ್‌ ಸ್ವರೂಪ್‌ ಸ್ವಾಮಿ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು theprint.in ವರದಿ ಮಾಡಿದೆ. ಚೌಧರಿ ಚರಣ್ ಸಿಂಗ್ ಯುನಿವರ್ಸಿಟಿಯಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವ ವೇಳೆ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ಕಾರ್ಯಕ್ರಮದ ಬಳಿಕ ಸಾಮಾಜಿಕ ತಾಣದಾದ್ಯಂತ ವೀಡಿಯೋ ವೈರಲ್ ಆಗಿದ್ದು, ಇದರನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

“ಕುರ್ ಆನ್ ಪಠಿಸುವವರು ರಾಕ್ಷಸರಾಗುತ್ತಾರೆ. ಅವರು ಮನುಷ್ಯರಾಗಿರುವುದಿಲ್ಲ. ಯಾರಿಗಾದರೂ ಭಾರತದಲ್ಲಿ ರಿಬೇಕು ಎಂಬ ಇಚ್ಛೆಯಿದ್ದರೆ ಅವರು ನಮಾಝ್ ಮತ್ತು ಕುರ್ ಆನ್ ಅನ್ನು ತ್ಯಜಿಸಬೇಕು. ಇಲ್ಲದಿದ್ದಲ್ಲಿ ನಾವೆಲ್ಲರೂ ಸೇರಿ ಅವರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಹಿಷ್ಕಾರ ಮಾಡಿದರೆ ಅವರು ಹಿಂದೂ ಧರ್ಮಕ್ಕೆ ಮತಾಂತರವಾಗುತ್ತಾರೆ” ಎಂದು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

“ನಮಗೆ ಒಂದು ಕೋಟಿ ಹಿಂದೂ ಯುವಕರ ಪಡೆಯನ್ನು ತಯಾರಿಸಬೇಕಿದೆ. ನಮಗೆ ಸ್ವಯಂ ಸೇವಕರ ಅಗತ್ಯವಿಲ್ಲ, ಸ್ವಯಂ ಸೇನೆಯ ಅಗತ್ಯವಿದೆ. ಬಂದೂಕು, ಕತ್ತಿ, ನಿಮ್ಮಲ್ಲಿರುವ ಆಯುಧಗಳನ್ನೆಲ್ಲಾ ಎತ್ತಿಕೊಳ್ಳಿ. ಯುದ್ಧಕ್ಕೆ ಈಗಾಗಲೇ ಕರೆ ನೀಡಲಾಗಿದೆ. ಹಿಂದೂ ರಾಷ್ಟ್ರ ನಿರ್ಮಾಣವಾಗುವವರೆಗೆ ನಾವು ಇದನ್ನು ಮುಂದುವರಿಸಬೇಕು” ಎಂದು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

ಈ ಕುರಿತಾದಂತೆ ಮೀರತ್ ಪೊಲೀಸ್ ಠಾಣೆಯನ್ನು theprint.in ಸಂಪರ್ಕಿಸಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆಯೂ ಲಭ್ಯವಾಗಿಲ್ಲ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News