ಅನುಮತಿ ಸಿಗದಿದ್ದರೂ ನನ್ನ ಜೀವನದ ಕೊನೆಯ ಉಪವಾಸ ಸತ್ಯಾಗ್ರಹ ಮಾಡಿಯೇ ಸಿದ್ಧ: ಅಣ್ಣಾ ಹಝಾರೆ

Update: 2021-01-14 15:02 GMT

ಹೊಸದಿಲ್ಲಿ: ತನ್ನ ಪ್ರತಿಭಟನೆಗೆ ಅಧಿಕಾರಿಗಳು ಅನುಮತಿ ನೀಡದೆ ಇದ್ದರೂ ಹೊಸದಿಲ್ಲಿಯಲ್ಲಿ ಜನವರಿ ಅಂತ್ಯದಲ್ಲಿ ನನ್ನ ಜೀವನದ ಕೊನೆಯ ಉಪವಾಸ ಸತ್ಯಾಗ್ರಹ ಮಾಡಿಯೇ ಸಿದ್ದ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ಸಾಮಾಜಿಕ ಹೋರಾಟಗಾರ ಅಣ್ನಾ ಹಝಾರೆ ತಿಳಿಸಿದ್ದಾರೆ.

ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಹಝಾರೆ ನಾಲ್ಕು ಬಾರಿ ಪತ್ರ ಬರೆದಿದ್ದಾರೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಅವರಿಗೆ ಉತ್ತರ ನೀಡಿಲ್ಲ.

ನನ್ನನ್ನು ಬಾಯ್ತುಂಬ ಹೊಗಳುತ್ತಿದ್ದ ಬಿಜೆಪಿ ನಾಯಕರುಗಳು ಇದೀಗ ನನ್ನ ಪತ್ರಗಳಿಗೆ ಉತ್ತರಿಸುವ ಗೋಜಿಗೆ ಹೋಗುತ್ತಿಲ್ಲ. ಒಂದು ವೇಳೆ ಪ್ರಧಾನಿಗೆ ಮತ್ತೆ ನೆನಪಿಸುವ ಅವಶ್ಯಕತೆ ಇದ್ದರೆ, ತನ್ನನ್ನು ಹೊಗಳಿ 2011-13ರಲ್ಲಿ ಬಿಜೆಪಿ ನಾಯಕರು ಮಾಡಿರುವ ಭಾಷಣದ ವೀಡಿಯೊವನ್ನು ಕಳುಹಿಸಿಕೊಡುವೆ ಎಂದು ಹಝಾರೆ ಹೇಳಿದ್ದಾರೆ.

ಸ್ವಾಮಿನಾಥನ್  ಆಯೋಗದ ಶಿಫಾರಸುಗಳನ್ನು ಅನುಷ್ಟಾನಕ್ಕೆ ತರಲು ಹಾಗೂ ಎಂಎಸ್ ಪಿ(ಕನಿಷ್ಟ ಬೆಂಬಲ ಬೆಲೆ)ಪರಿಷ್ಕರಣೆ ಮಾಡಬೇಕೆಂದು ಆಗ್ರಹಿಸಿ ಪ್ರದಾನಿ ಮೋದಿಗೆ ಐದು ಬಾರಿ ಪತ್ರ ಬರೆದಿದ್ದೆ. ಆದರೆ ಅವರು ನನ್ನ ಯಾವ ಪತ್ರಕ್ಕೂ ಉತ್ತರಿಸಿಲ್ಲ. ಕೇಂದ್ರ ಕೃಷಿ ಸಚಿವರಿಗೆ ನಾಲ್ಕು ಬಾರಿ ಪತ್ರ ಬರೆದಿದ್ದೆ. ಅದಕ್ಕೂ ಉತ್ತರ ಲಭಿಸಿಲ್ಲ. ಹೀಗಾಗಿ ನಾನು ಜನವರಿ ಅಂತ್ಯಕ್ಕೆ ನನ್ನ ಜೀವನದ ಕೊನೆಯ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News