ಶಬರಿಮಲೆ: ಕೋವಿಡ್‌ನಿಂದಾಗಿ ಕಳೆಗುಂದಿದ ಮಕರವಿಳಕ್ಕು ಉತ್ಸವ

Update: 2021-01-14 15:15 GMT

ಶಬರಿಮಲೆ,ಜ.14: ಪ್ರಸಿದ್ಧ ಕ್ಷೇತ್ರ ಶಬರಿಮಲೆಯಲ್ಲಿ ವಾರ್ಷಿಕ ಯಾತ್ರೆಯ ಅತ್ಯಂತ ಮುಖ್ಯದಿನವಾದ ಮಕರವಿಳಕ್ಕು ಉತ್ಸವವನ್ನು ಗುರುವಾರ ಆಚರಿಸಲಾಯಿತು. ಕಳೆದ ವರ್ಷ ಈ ದಿನದಂದು ದೇವಸ್ಥಾನದ ಆವರಣದಲ್ಲಿ ಸುಮಾರು ಮೂರು ಲಕ್ಷ ಭಕ್ತರು ಸೇರಿದ್ದರೆ,ಈ ವರ್ಷ ಕೊರೋನ ವೈರಸ್ ಸಾಂಕ್ರಾಮಿಕದ ಭೀತಿಯಿಂದ ಉತ್ಸವವು ಕಳೆಗುಂದಿದ್ದು,ಕೇವಲ 5,000 ಜನರಿಗೆ ಪ್ರವೇಶಾವಕಾಶವನ್ನು ನೀಡಲಾಗಿತ್ತು.

ಯಾತ್ರಿಗಳಿಗೆ ಮಾಸ್ಕ್ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿತ್ತು. ಯಾತ್ರಿಗಳು ದೇವಸ್ಥಾನದ ಆವರಣವನ್ನು ಪ್ರವೇಶಿಸಲು ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿತ್ತು.

 ವಾರ್ಷಿಕ ಯಾತ್ರೆಯುದ್ದಕ್ಕೂ ಕೋವಿಡ್-19ನ ನೆಗೆಟಿವ್ ಆರ್‌ಟಿ-ಪಿಸಿಆರ್ ಮತ್ತು ಆ್ಯಂಟಿಜನ್ ಪರೀಕ್ಷಾ ವರದಿಗಳನ್ನು ತೋರಿಸಿದ ಯಾತ್ರಿಗಳಿಗೆ ಮಾತ್ರ ಪಂಪಾದ ಮೂಲಶಿಬಿರದಿಂದ ಬೆಟ್ಟವನ್ನೇರಲು ಅನುಮತಿಯನ್ನು ನೀಡಲಾಗಿತ್ತು.

ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಯು ಯಾತ್ರಿಗಳ ಅನುಕೂಲಕ್ಕಾಗಿ ಮತ್ತು ಸುಗಮ ದೇವರ ದರ್ಶನಕ್ಕಾಗಿ ಎಲ್ಲ ಭದ್ರತಾ ವ್ಯವಸ್ಥೆಗಳನ್ನು ಮಾಡಿತ್ತು.

ಭಕ್ತಾದಿಗಳ ನೂಕುನುಗ್ಗಲನ್ನು ತಡೆಯಲು ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಈ ಮೊದಲೇ ಶಬರಿಮಲೆಗೆ ಆಗಮಿಸಿ ದೇವರ ದರ್ಶನವನ್ನು ಮಾಡಿರುವ ಭಕ್ತಾದಿಗಳಿಗೆ ಮಕರವಿಳಕ್ಕು ಉತ್ಸವಗಳಲ್ಲಿ ಪಾಲ್ಗೊಳ್ಳಲು ಅವಕಾಶವಿರಲಿಲ್ಲ.

‘ಯಾತ್ರಿಗಳ ಕಡಿಮೆ ಸಂಖ್ಯೆಯಿಂದಾಗಿ ನಾವು ಈ ವರ್ಷ ಕೇವಲ 70 ಸ್ವಯಂಸೇವಕರನ್ನು ಒದಗಿಸಿದ್ದೇವೆ. ಕಳೆದ ವರ್ಷ ಸ್ವಯಂಸೇವಕರ ಸಂಖ್ಯೆ 300ಕ್ಕೂ ಹೆಚ್ಚಿತ್ತು ಎಂದು ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘಂ ಉಪಾಧ್ಯಕ್ಷ ಮೋಹನ ಕೆ.ನಾಯರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಸಂಜೆ ಪಂದಳಂ ಅರಮನೆಯಿಂದ ಶಬರಿಮಲೆ ಕ್ಷೇತ್ರಕ್ಕೆ ಆಗಮಿಸಿದ ತಿರುವಾಭರಣ ಮೆರವಣಿಗೆಯನ್ನು ಕೇರಳದ ದೇವಾಲಯಗಳ ಆಡಳಿತ ಸಚಿವ ಕಡಕಂಪಲ್ಲಿ ಸುರೇಂದ್ರನ್ ಮತ್ತು ಟಿಡಿಬಿಯ ಅಧಿಕಾರಿಗಳು ವಿದ್ಯುಕ್ತವಾಗಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News