ವಾಟ್ಸ್‌ಆ್ಯಪ್‌ನ ನೂತನ ಖಾಸಗಿತನ ನೀತಿ ಪ್ರಶ್ನಿಸಿ ದಿಲ್ಲಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆ

Update: 2021-01-14 16:14 GMT

ಹೊಸದಿಲ್ಲಿ,ಜ.14: ವಾಟ್ಸ್‌ಆ್ಯಪ್‌ನ ನೂತನ ಖಾಸಗಿತನ ನೀತಿಯನ್ನು ಪ್ರಶ್ನಿಸಿ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ. ಈ ನೀತಿಯು ಬಳಕೆದಾರರ ವರ್ಚುವಲ್ ಚಟುವಟಿಕೆಗಳನ್ನು ವೀಕ್ಷಿಸಲು ವಾಟ್ಸ್‌ಆ್ಯಪ್‌ಗೆ ಅಧಿಕಾರವನ್ನು ನೀಡುತ್ತದೆ ಎಂದು ಅರ್ಜಿದಾರರಾಗಿರುವ ವಕೀಲ ಚೈತನ್ಯ ರೊಹಿಲ್ಲಾ ವಾದಿಸಿದ್ದಾರೆ.

ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್‌ನ ನೂತನ ಖಾಸಗಿತನ ನೀತಿಯು ಸರ್ವೋಚ್ಚ ನ್ಯಾಯಾಲಯವು ಮೂಲಭೂತ ಹಕ್ಕು ಎಂದು ಘೋಷಿಸಿರುವ ವ್ಯಕ್ತಿಯ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ತನ್ನ ಅರ್ಜಿಯಲ್ಲಿ ತಿಳಿಸಿರುವ ರೊಹಿಲ್ಲಾ,ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್‌ನಂತಹ ವೇದಿಕೆಗಳು ಈಗಾಗಲೇ ಬಳಕೆದಾರರ ಮಾಹಿತಿಗಳನ್ನು ಮೂರನೆಯವರೊಂದಿಗೆ ಅನಧಿಕೃತವಾಗಿ ಹಂಚಿಕೊಳ್ಳುತ್ತಿವೆ. ಸರಕಾರದಿಂದ ಅನುಮತಿಯನ್ನು ಕೋರದೆ ವಾಟ್ಸ್‌ಆ್ಯಪ್ ನೂತನ ಖಾಸಗಿತನ ನೀತಿಯನ್ನು ತಂದಿದೆ ಎಂದು ಬೆಟ್ಟು ಮಾಡಿದ್ದಾರೆ.

ವಾಟ್ಸ್‌ಆ್ಯಪ್‌ನ ಈ ನೂತನ ನೀತಿಗೆ ತಕ್ಷಣ ತಡೆಯಾಜ್ಞೆ ನೀಡುವಂತೆ ಮತ್ತು ವ್ಯಕ್ತಿಗಳ ಖಾಸಗಿತನ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ವಾಟ್ಸ್‌ಆ್ಯಪ್ ಬಳಕೆಗಾಗಿ ಮಾರ್ಗಸೂಚಿಗಳನ್ನು ಹೊರಡಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶ ನೀಡುವಂತೆ ಅರ್ಜಿದಾರರು ಕೋರಿದ್ದಾರೆ. ಕಳೆದ ವಾರ ತನ್ನ ಖಾಸಗಿತನ ನೀತಿಯನ್ನು ಪರಿಷ್ಕರಿಸಿರುವ ವಾಟ್ಸ್‌ಆ್ಯಪ್ ತನ್ನ ನಿಬಂಧನೆಗಳು ಮತ್ತು ಷರತ್ತುಗಳನ್ನು ಬಳಕೆದಾರರು ಒಪ್ಪಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ ಮತ್ತು ಒಪ್ಪಿಕೊಳ್ಳದಿದ್ದರೆ ಫೆ.8ರ ಬಳಿಕ ಆ್ಯಪ್ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News