ಅಂಗಾಂಗ ದಾನ ಮಾಡುವ ಮೂಲಕ 5 ಜೀವಗಳನ್ನು ಉಳಿಸಿದ 20 ತಿಂಗಳ ಮಗು

Update: 2021-01-14 17:56 GMT

ಪಾಟ್ನಾ, ಜ. 14: ಇಪ್ಪತ್ತು ತಿಂಗಳ ಮಗುವೊಂದು ಅಂಗಾಂಗ ದಾನ ಮಾಡುವ ಮೂಲಕ ದೇಶದ ಅತಿ ಕಿರಿಯ ಅಂಗಾಂಗ ದಾನಿಯಾಗಿ ಗುರುತಿಸಿಕೊಂಡಿದೆ.

ದಿಲ್ಲಿಯ ರೋಹಿಣಿಯ ದಂಪತಿಯ 20 ತಿಂಗಳ ಪುತ್ರಿ ಧನಿಷ್ಠಾ ಜನವರಿ 8ರಂದು ಸಂಜೆ ಮನೆಯ ಮೊದಲನೇ ಮಹಡಿಯ ಬಾಲ್ಕನಿಯಲ್ಲಿ ಆಟವಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕೆಳಗೆ ಬಿದ್ದಿತ್ತು. ದಂಪತಿ ಕೂಡಲೇ ಮಗುವನ್ನು ದಿಲ್ಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ತಂದು ದಾಖಲಿಸಿದ್ದರು. ಆದರೆ, ಜನವರಿ 11ರಂದು ವೈದ್ಯರು ಮಗುವಿನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಹೇಳಿದ್ದರು.

‘‘ಧನಿಷ್ಠಾಳ ಮೆದುಳು ನಿಷ್ಕ್ರಿಯಗೊಂಡಿರುವುದರಿಂದ ಗುಣಮುಖವಾಗದು ಎಂದು ವೈದ್ಯರು ನಮಗೆ ತಿಳಿಸಿದ್ದರು. ಆಕೆಗೆ ಚಿಕಿತ್ಸೆ ಮುಂದುವರಿಯುತ್ತಿತ್ತು. ಈ ಸಂದರ್ಭ ತಮ್ಮ ಮಕ್ಕಳ ಜೀವ ಉಳಿಸಲು ಅಂಗಾಂಗ ದಾನಿಗಳನ್ನು ಎದುರು ನೋಡುತ್ತಿರುವ ಪೋಷಕರನ್ನು ನಾವು ಭೇಟಿಯಾಗಿ ಮಾತುಕತೆ ನಡೆಸಿದವು.

ಬಳಿಕ ವೈದ್ಯರನ್ನು ಭೇಟಿಯಾಗಿ, ಇತರ ರೋಗಿಗಳ ಜೀವ ಉಳಿಯುವುದಾದರೆ ನಮ್ಮ ಪುತ್ರಿಯ ಅಂಗಾಂಗ ದಾನ ಮಾಡಲು ಸಿದ್ಧ ಎಂದು ಹೇಳಿದೆವು. ಅದಕ್ಕೆ ವೈದ್ಯರು ಒಪ್ಪಿದರು’’ ಎಂದು ಧನಿಷ್ಠಾಳ ತಂದೆ ಅನೀಶ್ ಕುಮಾರ್ ಹೇಳಿದ್ದಾರೆ. ಮೃತದೇಹವನ್ನು ದಫನ, ದಹನ ಮಾಡುವ ಬದಲು ಇತರ ಮಕ್ಕಳನ್ನು ಉಳಿಸುವ ಉದಾತ್ತ ಕಾರ್ಯಕ್ಕೆ ಪುತ್ರಿಯ ಅಂಗಾಗ ದಾನ ಮಾಡಲು ನಾವಿಬ್ಬರು ನಿರ್ಧರಿಸಿದೆವು. ಇದರಿಂದ ನಮಗೆ ಆಕೆ ಇನ್ನು ಕೂಡ ಜೀವಂತವಾಗಿದ್ದಾಳೆ ಎಂಬ ಸಮಾಧಾನ ಉಂಟಾಗಬಹುದು ಎಂದು ಕುಮಾರ್ ಹೇಳಿದ್ದಾರೆ.

ಧನಿಷ್ಠಾಳ ಎಲ್ಲ ಅಂಗಾಂಗಳು ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಿವೆ. ಆಕೆಯ ಹೃದಯ, ಶ್ವಾಸಕೋಶ, ಎರಡೂ ಮೂತ್ರಪಿಂಡ ಹಾಗೂ ಎರಡೂ ಕಾರ್ನಿಯಾಗಳನ್ನು ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ತೆಗೆಯಲಾಗಿದೆ. ಈ ಅಂಗಾಂಗಳನ್ನು ಐವರು ರೋಗಿಗಳಿಗೆ ಕಸಿ ಮಾಡಲಾಗಿದೆ. ಮೂತ್ರಪಿಂಡವನ್ನು ಪ್ರೌಢ ವ್ಯಕ್ತಿಗೆ, ಹೃದಯ ಹಾಗೂ ಶ್ವಾಸಕೋಶವನ್ನು ಇಬ್ಬರು ಮಕ್ಕಳಿಗೆ ಕಸಿ ಮಾಡಲಾಗಿದೆ. ಕಾರ್ನಿಯಾವನ್ನು ಸಂರಕ್ಷಿಸಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News