ಸಿಎಎ ಪ್ರತಿಭಟನೆಯ ವಿಡಿಯೋ ಸಲ್ಲಿಕೆ ಕೋರುವ ಅರ್ಜಿಗೆ ದಿಲ್ಲಿ ಪೊಲೀಸರ ವಿರೋಧ

Update: 2021-01-14 17:18 GMT
ಫೈಲ್ ಚಿತ್ರ

ಹೊಸದಿಲ್ಲಿ,ಡಿ.14: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದಿಲ್ಲಿಯಲ್ಲಿ ನಡೆದ ಪ್ರತಿಭಟನೆಗಳ ಕುರಿತಾದ ವಿಡಿಯೋ ಪ್ರತಿಗಳನ್ನು ನೀಡುವಂತೆ ಕೋರಿ ಪಿಂಜಿರಾ ತೋಡ್ ಸಂಘಟನೆಯ ಹೋರಾಟಗಾರ್ತಿ ದೇವಾಂಗನಾ ಕಾಲಿಟಾ ಸಲ್ಲಿಸಿರುವ ಅರ್ಜಿಯು ವಿಚಾರಣೆಗೆ ಯೋಗ್ಯವಲ್ಲವೆಂದು ಪರಿಗಣಿಸುವಂತೆ ಕೋರಿ ದಿಲ್ಲಿ ಪೊಲೀಸರು ದಿಲ್ಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

 ಈಶಾನ್ಯ ದಿಲ್ಲಿಯಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಕಾಲಿಟಾ ಆರೋಪಿಯಾಗಿದ್ದಾರೆ.

 ದಿಲ್ಲಿ ಪೊಲೀಸರ ವಾದ ಆಲಿಸಿದ ನ್ಯಾಯಮೂರ್ತಿ ಸುರೇಶ್ ಕೆ. ಕೈಯಿಟ್ ನೇತೃತ್ವದ ನ್ಯಾಯಪೀಠವು ಈ ಬಗ್ಗೆ ಅಫಿಡವಿಟ್ ಒಂದನ್ನು ಸಲ್ಲಿಸುವಂತೆ ದಿಲ್ಲಿ ಪೊಲೀಸರಿಗೆ ಸೂಚಿಸಿತು ಹಾಗೂ ಮುಂದಿನ ಆಲಿಕೆಯನ್ನು ಫೆಬ್ರವರಿ 4ಕ್ಕೆ ನಿಗದಿಪಡಿಸಿತು.

  ದೇವಾಂಗನಾ ಕಲಿಟಾ ಅವರು ತನ್ನ ನ್ಯಾಯವಾದಿಗಳಾ ತುಷಾರಿಕಾ ಮಟ್ಟೂ, ಆಧಿತ್ ಎಸ್.ಪೂಜಾರಿ ಹಾಗೂ ಕುನಾಲ್ ನೇಗಿ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳ ಕುರಿತಾದ ವಿಡಿಯೋ ಪ್ರತಿಗಳು ಮತ್ತಿತರ ಇಲೆಕ್ಟ್ರಾನಿಕ್ ದತ್ತಾಂಶಗಳು ಪೊಲೀಸರ ಬಳಿ ಲಭ್ಯವಿದ್ದು, ಅವನ್ನು ಕೂಡಾ ದೋಷಾರೋಪ ಪಟ್ಟಿಯ ಜೊತೆ ಸಲ್ಲಿಸಬೇಕೆಂದು ಮನವಿ ಮಾಡಿದ್ದರು.

ಈಶಾನ್ಯ ದಿಲ್ಲಿಯ ಜಫರಾಬಾದ್ ಪ್ರದೇಶದಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಲಿಟಾಗೆ ಜಾಮೀನು ಬಿಡುಗಡೆ ದೊರೆತಿದೆ. ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈಶಾನ್ಯ ದಿಲ್ಲಿ ಗಲಭೆಗೆ ಸಂಬಂಧಿಸಿ ಕಲಿಟಾ ಹಾಗೂ ಪಿಂಜರಾತೋಡ್ ಸಂಘಟನೆಯ ಇನ್ನೋರ್ವ ಉನ್ನತ ಸದಸ್ಯೆ ನಟಾಶಾ ನರ್ವಾಲ್ ಅವರನ್ನು ಮೇ 23ರಂದು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News