ಕೇಂದ್ರ ಸರಕಾರ-ರೈತರ 9ನೇ ಸುತ್ತಿನ ಮಾತುಕತೆ ಅಂತ್ಯ, ಬಿಕ್ಕಟ್ಟು ಮುಂದುವರಿಕೆ

Update: 2021-01-15 12:31 GMT

ಹೊಸದಿಲ್ಲಿ: ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂಬ ಬೇಡಿಕ ಇಟ್ಟಿರುವ ರೈತರುಗಳು ಹಾಗೂ ಕೇಂದ್ರ ಸರಕಾರದ ಮಧ್ಯೆ ಶುಕ್ರವಾರ ನಡೆದಿರುವ 9ನೇ ಸುತ್ತಿನ ಮಾತುಕತೆ ಅಂತ್ಯವಾಗಿದೆ. ಆದರೆ ಬಿಕ್ಕಟ್ಟು ಮುಂದುವರಿದಿದೆ.

ಸರಕಾರ ಅಚಲವಾಗಿದ್ದು, ಅದು ಕಾನೂನುಗಳನ್ನು ರದ್ದು ಮಾಡಲಾರದು. ಅದನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಬದಲು ಅಗತ್ಯ ಸರಕುಗಳ ಕಾಯ್ದೆಯಲ್ಲಿ ಮಾಡಿದ ಬದಲಾವಣೆಗಳನ್ನು ತೆಗೆದುಹಾಕುವಂತೆ ನಾವು ಸೂಚಿಸಿದ್ದೇವೆ. ಆದರೆ, ಕೃಷಿ ಸಚಿವರು ಈ ಕುರಿತು ಏನನ್ನೂ ಹೇಳಿಲ್ಲ ಎಂದು ಅಖಿಲ ಭಾರತ ಕಿಸಾನ್ ಸಭಾ(ಪಂಜಾಬ್)ನಾಯಕ ಬಲ್ಕರನ್ ಸಿಂಗ್ ಬ್ರಾರ್ ಎನ್ ಡಿಟಿವಿಗೆ ತಿಳಿಸಿದ್ದಾರೆ.

ಮುಂದಿನ ಸುತ್ತಿನ ಮಾತುಕತೆಯು ಜನವರಿ 19ರಂದು ನಡೆಯಲಿದೆ. ಬಿಕ್ಕಟ್ಟನ್ನು ಕೊನೆಗೊಳಿಸಲು ಸುಪ್ರೀಂಕೋರ್ಟ್ ನೇಮಕ ಮಾಡಿರುವ ಸಮಿತಿಯು ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ಆರಂಭಿಸುವ ದಿನದಂದೇ ಈ ಸಭೆ ನಡೆಯಲಿದೆ.

ಕೇಂದ್ರದೊಂದಿಗೆ ಮಾತುಕತೆ ನಡೆಸುತ್ತಿರುವ 40 ರೈತ ಸಂಘಟನೆಗಳ ಮುಖಂಡರು ಕೇಂದ್ರದೊಂದಿಗೆ ನೇರ ಸಂವಹನವನ್ನು ಮುಂದುವರಿಸಬೇಕೆಂದು ಹೇಳಿದ್ದಾರೆ. ಸುಪ್ರೀಂಕೋರ್ಟ್ ನಿಂದ ನೇಮಕಗೊಂಡಿರುವ ಸಮಿತಿಯ ಸದಸ್ಯರು ಕೃಷಿ ಕಾನೂನುಗಳ ಪರವಾಗಿದ್ದು, ಸಮಿತಿ ಮುಂದೆ ನಾವು ಹಾಜರಾಗುವುದಿಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News