ಭಾರತದಲ್ಲಿ ಮಾನವ ಹಕ್ಕುಗಳ ರಕ್ಷಕರಿಗೆ ಸೂಕ್ತ ರಕ್ಷಣೆಯಿಲ್ಲ:ವಿಶ್ವಸಂಸ್ಥೆ ಪ್ರತಿನಿಧಿ ಆತಂಕ

Update: 2021-01-16 14:14 GMT

ಹೊಸದಿಲ್ಲಿ,ಜ.16: ಮಾನವ ಹಕ್ಕುಗಳ ಕಾರ್ಯಕರ್ತರನ್ನು ಭಾರತವು ನಡೆಸಿಕೊಳ್ಳುತ್ತಿರುವ ರೀತಿಯನ್ನು ಮಾನವ ಹಕ್ಕುಗಳ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಮೇರಿ ಲಾಲರ್ ಅವರು ಕಟುವಾಗಿ ಟೀಕಿಸಿದ್ದಾರೆ. ಮಾನವ ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಅವರ ಬಂಧನಕ್ಕೆ ನೂರು ದಿನಗಳು ತುಂಬಿದ ಪ್ರಯುಕ್ತ ಶುಕ್ರವಾರ ಆಯೋಜಿಸಲಾಗಿದ್ದ ಆನ್‌ಲೈನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಲಾಲರ್,ಭಾರತವು ಮಾನವ ಹಕ್ಕು ರಕ್ಷಕರಿಗೆ ಸೂಕ್ತ ರಕ್ಷಣೆಯನ್ನು ನೀಡುತ್ತಿಲ್ಲ. ಏಕತೆಯೇ ಸಾಕಾರವೆತ್ತಂತಿರುವ ಫಾ. ಸ್ಟ್ಯಾನ್ ಸ್ವಾಮಿ ಅವರಂತಹ ಮಾನವ ಹಕ್ಕು ರಕ್ಷಕರನ್ನು ಸರಕಾರವು ನಡೆಸಿಕೊಳ್ಳುತ್ತಿರುವ ರೀತಿಯು ತನ್ನಲ್ಲಿ ದಿಗಿಲು ಮೂಡಿಸಿದೆ ಎಂದು ಹೇಳಿದರು.

ಸ್ವಾಮಿ ಬಂಧನದ ಕುರಿತು ಕಳವಳಗಳನ್ನು ವ್ಯಕ್ತಪಡಿಸಿ ತಾನು ಭಾರತ ಸರಕಾರಕ್ಕೆ ಪತ್ರವನ್ನು ಬರೆದಿದ್ದೆ,ಆದರೆ ಈವರೆಗೂ ತನಗೆ ಉತ್ತರ ಬಂದಿಲ್ಲ ಎಂದು ತಿಳಿಸಿದ ಅವರು,ವಿಶ್ವಸಂಸ್ಥೆಯ ಪತ್ರಗಳಿಗೆ ಉತ್ತರಿಸಲು ಸರಕಾರಗಳಿಗೆ 60 ದಿನಗಳ ಕಾಲಾವಕಾಶವನ್ನು ನೀಡಲಾಗುತ್ತದೆ. ಆದರೆ ಭಾರತೀಯ ಅಧಿಕಾರಿಗಳಿಂದ ಉತ್ತರವನ್ನು ತಾನಿನ್ನೂ ಸ್ವೀಕರಿಸಬೇಕಿದೆ ಎಂದರು. ಭಾರತದಲ್ಲಿ ಮಾನವ ಹಕ್ಕುಗಳ ಉತ್ತೇಜನ ಮತ್ತು ರಕ್ಷಣೆಗೆ ಗಂಭೀರ ಸವಾಲುಗಳಿವೆ ಮತ್ತು ಮಾನವ ಹಕ್ಕುಗಳ ಹೋರಾಟಗಾರರ ರಕ್ಷಣೆಗೆ ಸರಕಾರವು ಹೊಣೆಗಾರನಾಗಿದೆ ಎಂದರು.

ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯನ್ನು ಟೀಕಿಸಿದ ಅವರು,ಕಾಯ್ದೆಯು ಭಯೋತ್ಪಾದಕ ಕೃತ್ಯವನ್ನು ನಿಖರವಾಗಿ ವ್ಯಾಖ್ಯಾನಿಸಿಲ್ಲ ಮತ್ತು ಕಾನೂನು ನಿರ್ದಿಷ್ಟತೆಯನ್ನು ಒದಗಿಸುವಲ್ಲಿ ವಿಫಲಗೊಂಡಿದೆ ಎಂದು ಹೇಳಿದರು.

ಈ ತಿಂಗಳ ಪೂರ್ವಾರ್ಧದಲ್ಲಿ ಪತ್ರದ ಪ್ರತಿಯನ್ನು ಟ್ವೀಟಿಸಿದ್ದ ಲಾಲರ್, ಸ್ವಾಮಿಯವರ ಬಂಧನವು ನಿರಂಕುಶ ಕ್ರಮವಾಗಿದೆ ಎಂದು ಬಣ್ಣಿಸಿದ್ದರು. ಸ್ವಾಮಿ 1970ರ ದಶಕದಿಂದಲೂ ಆದಿವಾಸಿಗಳು ಮತ್ತು ದಲಿತರ ಹಕ್ಕುಗಳನ್ನು ರಕ್ಷಿಸಲು ಶ್ರಮಿಸುತ್ತಿದ್ದಾರೆ ಎಂದು ಅವರು ಬೆಟ್ಟು ಮಾಡಿದ್ದರು.

ಭೀಮಾ-ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿಯವರನ್ನು ಕಳೆದ ವರ್ಷದ ಅ.8ರಂದು ಎನ್‌ಐಎ ಬಂಧಿಸಿತ್ತು. ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯಡಿ ಜೈಲಿನಲ್ಲಿರುವ ಸ್ವಾಮಿ ಮತ್ತು ಇತರ ಹಲವಾರು ಸಾಮಾಜಿಕ ಕಾರ್ಯಕರ್ತರು,ವಕೀಲರು ಮತ್ತು ವಿದ್ವಾಂಸರು ಸರಕಾರವನ್ನು ಪದಚ್ಯುತಗೊಳಿಸುವ ಮತ್ತು ಪ್ರಧಾನಿಯವರನ್ನು ಹತ್ಯೆ ಮಾಡುವ ಮಾವೋವಾದಿಗಳ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪಗಳನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News