ಸಿಬಿಐ ಅಧಿಕಾರಿಗಳ ಬೃಹತ್ ಲಂಚದ ಜಾಲ ಪತ್ತೆ: ನಾಲ್ವರು ಅಧಿಕಾರಿಗಳ ವಿರುದ್ಧ ಎಫ್ಐಆರ್

Update: 2021-01-16 16:45 GMT

ಹೊಸದಿಲ್ಲಿ, ಜ. 16: ಸಿಬಿಐ ಅಧಿಕಾರಿಗಳ ಬೃಹತ್ ಲಂಚದ ಜಾಲವೊಂದನ್ನು ಭೇದಿಸಲಾಗಿದೆ. ಕೆಲವು ಸಿಬಿಐ ಅಧಿಕಾರಿಗಳು ತನಿಖೆಯಲ್ಲಿ ರಾಜಿಮಾಡಿಕೊಳ್ಳಲು ಲಂಚವನ್ನು ಪಡೆಯುತ್ತಿದ್ದುದು ಬಯಲಾಗಿದೆ. ಬ್ಯಾಂಕ್‌ಗಳಿಗೆ ಕೋಟಿಗಟ್ಟಲೆ ಹಣವನ್ನು ವಂಚಿಸಿರುವ ಎರಡು ಕಂಪೆನಿಗಳಿಂದ ಲಂಚ ಸ್ವೀಕರಿಸಿದ ಆರೋಪದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಯ ನಾಲ್ವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಿಬಿಐ ತಂಡವೊಂದು ಆರೋಪಿ ಅಧಿಕಾರಿಗಳ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ, ಪ್ರಕರಣಕ್ಕೆ ಸಂಬಂಧಿಸಿ 8 ಪುಟಗಳ ಎಫ್‌ಐ ಆರ್‌ನ್ನು ಸಿಬಿಐ ಬಿಡುಗಡೆಗೊಳಿಸಿದೆ. ಸಿಬಿಐ ಇನ್ಸ್‌ಪೆಕ್ಟರ್ ಕಪಿಲ್ ಧನಕಡ್ ಅವರು ತನ್ನ ಮೇಲಾಧಿಕಾರಿಗಳು, ಉಪ ಪೊಲೀಸ್ ಅಧೀಕ್ಷಕ ಆರ್.ಸಂಘ್ವಾನ್ ಹಾಗೂ ಆರ್.ಕೆ.ರಿಶಿ ಅವರಿಂದ ಕನಿಷ್ಠ ತಲಾ 10 ಲಕ್ಷ ರೂ.ಗಳನ್ನು ಪಡೆದಿದ್ದಾರೆಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಈ ಆರೋಪಿಗಳು 700 ಕೋಟಿ ರೂ. ಬ್ಯಾಂಕ್ ವಂಚನೆಯ ಆರೋಪ ಎದುರಿಸುತ್ತಿರುವ ಶ್ರೀ ಶ್ಯಾಮ್ ಪಲ್ಪ್ ಆ್ಯಂಡ್ ಬೋರ್ಡ್ ಮಿಲ್ಸ್ ಕಂಪೆನಿ ಹಾಗೂ 600 ಕೋಟಿ ರೂ.ಬ್ಯಾಂಕ್ ವಂಚನೆಯ ಆರೋಪ ಹೊತ್ತಿರುವ ಫ್ರೋಸ್ಟ್ ಇಂಟರ್‌ನ್ಯಾಶನಲ್ ಪರವಾಗಿ ವಶೀಲಿ ಮಾಡಲು ಆರ್.ಕೆ.ಸಂಘ್ವಾನ್ ಹಾಗೂ ಆರ್.ಕೆ.ರಿಶಿ ಅವರು ಧನಕಡ್‌ಗೆ ಈ ಮೊತ್ತವನ್ನು ನೀಡಿದ್ದಾರೆಂದು ಎಫ್‌ಐಆರ್ ಆಪಾದಿಸಿದೆ.

‘ಆರೋಪಿಗಳಾದ ಸಂಘ್ವಾನ್, ರಿಶಿ,ಧನಕಡ್ ಹಾಗೂ ಸ್ಟೆನೋಗ್ರಾಫರ್ ಸಮೀರ್ ಕುಮಾರ್ ಸಿಂಗ್ ಅವರು ನ್ಯಾಯವಾದಿಗಳಾದ ಅರವಿಂದ ಕುಮಾರ್ ಗುಪ್ತಾ ಹಾಗೂ ಮನೋಹರ್ ಮಲಿಕ್ ಹಾಗೂ ಇನ್ನು ಕೆಲವು ಆರೋಪಿಗಳು, ಹಣಕಾಸಿಗೆ ಸಂಬಂಧಿಸಿದ ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ತನಿಖೆಯ ಪ್ರಾಮಾಣಿಕತೆಯ ಜೊತೆ ರಾಜಿ ಮಾಡಿಕೊಂಡಿದ್ದಾರೆ’ ಎಂದು ಎಫ್‌ಐಆರ್ ಆಪಾದಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನ್ನ ಅಧಿಕಾರಿಗಳಾದ ಸಂಗ್ವಾನ್, ರಿಶಿ, ಧನಕಡ್ ಹಾಗೂ ಸಮೀರ್ ಕುಮಾರ್ ಸಿಂಗ್ ಅಲ್ಲದೆ ಹೆಚ್ಚುವರಿ ನಿರ್ದೇಶಕ ಶ್ರೀ ಶ್ಯಾಮ್ ಪಲ್ಪ್ ಹಾಗೂ ಬೋರ್ಡ್ ಮಿಲ್ಸ್‌ನ ಹೆಚ್ಚುವರಿ ನಿರ್ದೇಶಕ ಮನದೀಪ್ ಕೌರ್ ಧಿಲ್ಲೋನ್ ಹಾಗೂ ಫ್ರೋಸ್ಟ್ ಇಂಟರ್‌ನ್ಯಾಶನಲ್‌ನ ನಿರ್ದೇಶಕರಾದ ಸುಜಯ್ ದೇಸಾಯಿ ಹಾಗೂ ಉದಯ್ ದೇಸಾಯಿ ವಿರುದ್ದವೂ ಮೊಕದ್ದಮೆ ದಾಖಲಿಸಿದೆ.

ಈ ಜಾಲವು ಕನಿಷ್ಠ ಪಕ್ಷ 2018ರಿಂದಲೇ ಸಕ್ರಿಯವಾಗಿತ್ತೆಂದು ವರದಿ ತಿಳಿಸಿದೆ.

ಈ ಜಾಲವು ತಮಗೆ ಲಂಚ ನೀಡಿದ ಕಂಪೆನಿಗಳ ಬ್ಯಾಂಕ್ ವಂಚನೆ ಪ್ರಕರಣದ ತನಿಖೆಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡುತ್ತಿತ್ತು. ಸಿಬಿಐ ದಾಳಿಗಳು, ತನಿಖೆಯ ಸ್ಥಿತಿಗತಿ, ಮೊಕದ್ದಮೆ ಸಲ್ಲಿಕೆ ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸುತ್ತಿದ್ದರು. ಇನ್ನಷ್ಟು ಸಿಬಿಐ ಅಧಿಕಾರಿಗಳು ಕೂಡಾ ಈ ಜಾಲದಲ್ಲಿ ಶಾಮೀಲಾಗಿರುವ ಸಾಧ್ಯತೆಯಿದ್ದು, ವಿವಿಧ ಹಂತಗಳಲ್ಲಿ ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆಂದು ಹಿರಿಯ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೋಸ್ಟ್ ಇಂಟರ್‌ನ್ಯಾಶನಲ್ ಕಂಪೆನಿಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣವೊಂದರಲ್ಲಿ ತನಿಖೆಗೆ ಸಂಬಂಧಿಸಿ ಮಾಹಿತಿಯನ್ನು ಒದಗಿಸಲು ಹಾಗೂ ಆರೋಪಿಗಳನ್ನು ರಕ್ಷಿಸುವುದಕ್ಕಾಗಿ ಸಿಬಿಐ ಅಕಾಡಮಿಯಲ್ಲಿ ನಿಯೋಜಿತರಾಗಿರುವ ಇನ್ನೋರ್ವ ಡಿಎಸ್‌ಪಿ ರಿಶಿ, ಎಂಬವರು ಧನಕಡ್‌ಗೆ 10 ಲಕ್ಷ ರೂ. ಪಾವತಿಸಿರುವುದಾಗಿಯೂ ಎಫ್‌ಐಆರ್ ಆಪಾದಿಸಿದೆ.

ಆರೋಪಿ ಸಿಬಿಐ ಅಧಿಕಾರಿ ರಿಶಿ ಅವರು ಚಂಡೀಗಢ ಮೂಲದ ಫ್ರೋಸ್ಟ್ ಇಂಟರ್ ನ್ಯಾಶನಲ್ ಪರವಾಗಿ ವಶೀಲಿ ನಡೆಸಲು ನ್ಯಾಯವಾದಿಗಳಾದ ಮನೋಹರ್ ಮಲಿಕ್ ಹಾಗೂ ಅರವಿಂದ ಗುಪ್ತಾ ಅವರಿಂದ ಎರಡು ಬಾರಿ 15 ಲಕ್ಷ ರೂ. ಪಡೆದಿದ್ದಾರೆಂಬುದಾಗಿಯೂ ಎಫ್‌ಐಆರ್ ಆಪಾದಿಸಿದೆ.

ರಿಶಿ ಮೂಲಕ ಡೀಲ್ ಕುದುರಿಸಿದ್ದಕ್ಕಾಗಿ ಧನಕಡ್ ಅವರು ಗುಪ್ತಾರಿಂದ 2.5 ಲಕ್ಷ ರೂ.ಗಳನ್ನು ಎರಡು ಸಲ ಪಡೆದುಕೊಂಡಿದ್ದಾರೆಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News