ಪಿಎಂ ಕೇರ್ಸ್‌ ಫಂಡ್‌ನ ಪಾರದರ್ಶಕತೆ ಬಗ್ಗೆ ಸಂದೇಹ: 100 ಮಾಜಿ ನಾಗರಿಕ ಸೇವಾ ಅಧಿಕಾರಿಗಳಿಂದ ಪ್ರಧಾನಿಗೆ ಪತ್ರ

Update: 2021-01-16 18:27 GMT

ಹೊಸದಿಲ್ಲಿ,ಜ.16: ಪಿಎಂ-ಕೇರ್ಸ್‌ ಫಂಡ್‌ನ ಪಾರದರ್ಶಕತೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿ 100 ಮಂದಿ ಮಾಜಿ ನಾಗರಿಕ ಸೇವಾ ಅಧಿಕಾರಿಗಳು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

 ಪ್ರಾಮಾಣಿಕತೆ ಹಾಗೂ ಸಾರ್ವಜನಿಕ ಉತ್ತರದಾಯಿತ್ವದ ಮಾನದಂಡಗಳಿಗೆ ಬದ್ಧತೆಯನ್ನು ಪ್ರದರ್ಶಿಸಲು, ಪಿಎಂ ಕೇರ್ಸ್‌ ಫಂಡ್‌ಗೆ ಸಂದಾಯವಾಗಿರುವ ಹಣ ಹಾಗೂ ವೆಚ್ಚದ ವಿವರಗಳನ್ನು ಸಾರ್ವಜನಿಕವಾಗಿ ಲಭ್ಯವಿರುವಂತೆ ಮಾಡಬೇಕೆಂದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಪಿಎಂ ಕೇರ್ಸ್‌ ಫಂಡ್‌ನಲ್ಲಿ ಅಕ್ರಮ ನಡೆದಿರಬಹುದೆಂಬ ಸಂದೇಹಗಳನ್ನು ನಿವಾರಿಸಲು ಹೀಗೆ ಮಾಡುವುದು ಅಗತ್ಯವೆಂದು ಅವರು ಹೇಳಿದ್ದಾರೆ.

  ‘‘ ಕೋವಿಡ್ ಸಾಂಕ್ರಾಮಿಕದಿಂದ ಬಾಧಿತರಾದ ಜನತೆಯ ನೆರವಿಗಾಗಿ ಸ್ಥಾಪನೆಯಾಗಿರುವ ಪಿಎಂ ಕೇರ್ಸ್‌ ನಿಧಿಯ ಕುರಿತು ನಡೆಯುತ್ತಿರುವ ಚರ್ಚೆಯನ್ನು ನಾವು ಅತ್ಯಂತ ಕಾಳಜಿಯಿಂದ ಗಮನಿಸುತ್ತಾ ಬಂದಿದ್ದೇವೆ. ಆದರೆ ಆ ನಿಧಿಯನ್ನು ಸ್ಥಾಪಿಸಿದ ಉದ್ದೇಶ ಹಾಗೂ ಅದನ್ನು ನಡೆಸುತ್ತಿರುವ ರೀತಿಯು, ಹಲವಾರು ಉತ್ತರ ದೊರೆಯದಂತಹ ಪ್ರಶ್ನೆಗಳನ್ನು ಮೂಡಿಸಿದೆ’’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

 ಪ್ರಧಾನಿಯವರು ಜೊತೆಗೂಡಿರುವಂತಹ ಈ ನಿಧಿಯ ಕುರಿತಾದ ಎಲ್ಲಾ ವ್ಯವಹಾರಗಳಲ್ಲಿ ಪಾರದರ್ಶಕತೆಯನ್ನು ಖಾತರಿಪಡಿಸುವ ಮೂಲಕ ಪ್ರಧಾನಿ ಸ್ಥಾನಮಾನ ಹಾಗೂ ಘನತೆಗೆ ಚ್ಯುತಿಬಾರದಂತೆ ನೋಡಿಕೊಳ್ಳುವುದು ಅತ್ಯಗತ್ಯವಾಗಿದೆ’’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮಾಜಿ ಐಎಎಸ್ ಅಧಿಕಾರಿಗಳಾದ ಅನಿತಾ ಅಗ್ನಿಹೋತ್ರಿ, ಎಸ್.ಪಿ. ಆ್ಯಂಬ್ರೋಸ್, ಶರದ್ ಬೆಹಾರ್, ಸಜ್ಜದ್ ಹಸ್ಸನ್, ಹರ್ಷ್ ಮಂಧೇರ್, ಪಿ. ಜಾಯ್ ಊಮೆನ್, ಅರುಣಾ ರಾಯ್, ಮಾಜಿ ರಾಜತಾಂತ್ರಿಕರಾದ ಮಧು ಭಂಡಾರಿ,ಕೆ.ಪಿ. ಫೆಬಿಯನ್,ದೇಬ್ ಮುಖರ್ಜಿ, ಸುಜಾತಾ ಸಿಂಗ್ ಹಾಗೂ ಮಾಜಿ ಐಪಿಎಸ್ ಅಧಿಕಾರಿಗಳಾದ ಎ.ಎ. ದುಲಾತ್, ಪಿ.ಜಿ.ಜೆ. ನಂಬೂದಿರಿ ಹಾಗೂ ಜೂಲಿಯೋ ರಿಬೆರೋ ಮತ್ತಿತರರು ಈ ಪತ್ರಕ್ಕೆ ಸಹಿಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News