ಹೊಸ ಉದ್ಯಮಗಳ ಉತ್ತೇಜನಕ್ಕೆ 1,000 ಕೋಟಿ ರೂ. ನಿಧಿ ಸ್ಥಾಪನೆ: ಪ್ರಧಾನಿ ಮೋದಿ

Update: 2021-01-16 18:10 GMT

ಹೊಸದಿಲ್ಲಿ, ಜ.1 6: ಸ್ಟಾರ್ಟ್‌ಅಪ್ ಉದ್ಯಮಗಳನ್ನು ಉತ್ತೇಜಿಸಲು ಹಾಗೂ ನವೋದ್ಯಮಿಗಳಿಗೆ ನೆರವಾಗುವುದಕ್ಕಾಗಿ 1 ಸಾವಿರ ಕೋಟಿ ರೂ.ಗಳ ‘‘ಸ್ಟಾರ್ಟ್ ಆಫ್ ಇಂಡಿಯಾ ಸೀಡ್ ಫಂಡ್’’ ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಶನಿವಾರ ನಡೆದ ‘‘ಪ್ರಾರಂಭ್: ಸ್ಟಾರ್ಟ್ ಅಪ್ ಇಂಡಿಯಾ’’ ಅಂತಾರಾಷ್ಟ್ರೀಯ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ನವೋದ್ಯಮಗಳ ಬೆಳವಣಿಗೆಯು ಉದೋಗಗಳ ಸೃಷ್ಟಿಗೆ ಹಾಗೂ ಜನರ ಜೀವನ ಸುಧಾರಣೆಗೆ ನೆರವಾಗಲಿದೆಯೆಂದು ಭರವಸೆ ವ್ಯಕ್ತಪಡಿಸಿದರು.

 ‘‘ನವೋದ್ಯಮಗಳಿಗೆ ಆರಂಭಿಕ ಬಂಡವಾಳವನ್ನು ಒದಗಿಸುವುದಕ್ಕಾಗಿ ದೇಶವು 1 ಸಾವಿರ ಕೋಟಿ ರೂ.ಗಳ ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಆರಂಭಿಸಲಿದೆ. ಇದು ದೇಶದಲ್ಲಿ ನವೋದ್ಯಮಗಳ ಸ್ಥಾಪನೆಗೆ ನೆರವಾಗಲಿದೆ ಹಾಗೂ ಅವುಗಳ ಬೆಳವಣಿಗೆಯನ್ನು ಉತ್ತೇಜಿಸಲಿದೆ’’ ಎಂದರು.

2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯ ಐದನೇ ವರ್ಷಾಚರಣೆಯ ಪ್ರಯುಕ್ತ ಈ ಶೃಂಗಸಭೆಯನ್ನು ಆಯೋಜಿಸಲಾಗಿತ್ತು.

ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳು ಕೇವಲ ಬೃಹತ್ ನಗರಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಶೇ. 40ರಷ್ಟು ನವೋದ್ಯಮಿಗಳು ಎರಡನೆ ಹಾಗೂ ಮೂರನೇ ಸ್ತರಗಳ ನಗರಗಳಿಗೆ ಸೇರಿದವರಾಗಿದ್ದಾರೆಂದು ಪ್ರಧಾನಿ ಹೇಳಿದರು.

2014ರಲ್ಲಿ ಭಾರತದಲ್ಲಿ ಯೂನಿಕಾರ್ನ್ ಕ್ಲಬ್‌ನಲ್ಲಿ (100 ಕೋಟಿಗೂ ಅಧಿಕ ವೌಲ್ಯದ ಕಂಪೆನಿಗಳು) ಕೇವಲ ನಾಲ್ಕು ಸ್ಟಾರ್ಟ್‌ಅಪ್‌ಗಳು ಮಾತ್ರವೇ ಇದ್ದವು. ಇಂದು ಅವುಗಳ ಸಂಖ್ಯೆ 30ನ್ನು ಮೀರಿದೆ ಎಂದವರು ಹೇಳಿದರು. 2020ನೇ ಇಸವಿಯೊಂದರಲ್ಲೇ 11 ಸ್ಟಾರ್ಟ್‌ಅಪ್‌ಗಳು ಯೂನಿಕಾರ್ನ್ ಕ್ಲಬ್ ಪ್ರವೇಶಿಸಿವೆ ಎಂದವರು ಮಾಹಿತಿ ನೀಡಿದರು. ದೇಶದಲ್ಲಿ ಪ್ರಸಕ್ತ 41 ಸಾವಿರ ಸಾರ್ಟ್‌ಅಪ್‌ಗಳಿರುವುದಾಗಿ ಪ್ರಧಾನಿ ಮೋದಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News